ಮೂಡುಬಿದಿರೆ: ದೇಶದಲ್ಲಿ ಅತ್ಯಂತ ಅಪರೂಪವಾದ ಬ್ರಹ್ಮದೇವಸ್ಥಾನ ಮೂಡುಬಿದಿರೆಯ ಲಾಡಿಯಲ್ಲಿದೆ. ಇದರ ಅಭಿವೃದ್ಧಿ ಕಾರ್ಯ ಸಾಂಗವಾಗಿ ನೆರವೇರುವಂತಾಗಲಿ. ನಿರ್ವಿಘ್ನವಾಗಿ ಸಕಲ ಕಾರ್ಯಗಳು ನಡೆಯುವಂತಾಗಲಿ. ಮಾನವನ ಪ್ರಯತ್ನದ ಜೊತೆಗೆ ಭಗವಂತನ ಅನುಗ್ರಹವೂ ಇದ್ದರೆ ಮಾಡುವ ಕಾರ್ಯಗಳಲ್ಲಿ ಸತ್‌ಕೀರ್ತಿ, ಜಯ ಪ್ರಾಪ್ತವಾಗುತ್ತದೆ. ಅಣುರೇಣು ತೃಣಕಾಷ್ಟಗಳಲ್ಲಿ ಪರಿಪೂರ್ಣ ಗೋವಿಂದನಿರುತ್ತಾನೆ. ಭಗವಂತನ ಆರಾಧನೆಗೆ ಗುಡಿ ಎಂಬುದು ಬೇಕು. ದೇವರು ಎಲ್ಲೆಡೆಯಿದ್ದರೂ ಅವನೊಂದಿಗೆ ಸಂವಹನ ಮಾಡಲು ಒಂದು ಮಾಧ್ಯಮವಾಗಿ ದೇಗುಲವಿರುತ್ತದೆ ಎಂದು ಉಡುಪಿ ಅಧೋಕ್ಷಜ ಮಠದ(Udupi Adhokshaja Mata) ಶ್ರೀ ಪರಮಪೂಜ್ಯ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು(Vishwaprasanna thirtha shreepada) ನುಡಿದರು.
ಮೂಡುಬಿದಿರೆಯ ಲಾಡಿಯಲ್ಲಿ ಶ್ರೀ ಚತುರ್ಮಖ ಬ್ರಹ್ಮ ದೇವಸ್ಥಾನದ ನೂತನ ಗರ್ಭಗುಡಿಗೆ ಗುರುವಾರ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಂತಕೃಷ್ಣ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಗುಲವೊಂದರ ಪುನರ್ ನಿರ್ಮಾಣದ ಪುಣ್ಯ ಲಭಿಸಿರುವುದು ನಮ್ಮೆಲ್ಲರ ಭಾಗ್ಯ. ಮುಂದಿನ ಐದು ತಲೆಮಾರಿನ ತನಕ ಉಳಿಯುವಂತಹ ಸದೃಢವಾದಂತಹ ಶಿಲಾಮಯ ದೇಗುಲವನ್ನು ವಾಸ್ತು ಪ್ರಕಾರವಾಗಿ ನಿರ್ಮಿಸಲಾಗುತ್ತದೆ. ಊರವರ ಸಂಪೂರ್ಣ ಸಹಕಾರದೊಂದಿಗೆ, ಭಕ್ತಾದಿಗಳ ಸಹಕಾರದೊಂದಿಗೆ ದೇಗುಲ ನಿರ್ಮಾಣ ನಡೆಯಲಿದೆ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್(Abhayachandra Jain), ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಪಂಜ ಭಾಸ್ಕರ್ ಭಟ್, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ.ಗಣೇಶ್ ಕಿಣಿ ಬೆಳ್ವೆ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ, ಪುರಸಭಾ ಸದಸ್ಯ ಸುರೇಶ್ ಪ್ರಭು, ಉದ್ಯಮಿ ಶ್ರೀಪತಿ ಭಟ್ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ರವಿಪ್ರಸಾದ್ ಕೆ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಕುಮಾರ್ ಶೆಟ್ಟಿ ವಂದಿಸಿದರು.https://moodabidri.newskannada.com/special/shanaishchara-puja-at-daregudde-cultural-session