ಮಿಜಾರು: ಪರಿಶ್ರಮ ಇಲ್ಲದೆ ಸಾಧನೆ ಅಸಾಧ್ಯ. ಶ್ರಮದಿಂದ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ (Alwas College of Engineering and Technology) ಯಂಗ್ ಇಂಡಿಯಾದ ‘ಯುವ’ ಕಾರ್ಯ ನಿರ್ವಹಣಾ (Youth work management) ಮಂಡಳಿಯ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು.
ಸಮಯಕ್ಕೆ ತಕ್ಕಂತೆ ನಾವು ಬದಲಾಗಬೇಕು. ನಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಬೇಕು. ಜೀವನದಲ್ಲಿ ನೀತಿ-ನಿಯಮ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಬಡತನ ಯಾವತ್ತೂ ಯಶಸ್ಸಿಗೆ ಅಡ್ಡಿಯಾಗಬಾರದು ಎಂದರು. ಯಶಸ್ವಿ ಉದ್ಯಮಿಗೆ ವಿವಿಧ ಉದ್ಯೋಗಗಳ ಬಗ್ಗೆ ಜ್ಞಾನವಿರಬೇಕು. ಬದಲಾಗುತ್ತಿರುವ ನಿಯಮಾವಳಿ, ಸಮಾಜದ ಆಗುಹೋಗುಗಳ ಬಗ್ಗೆ ಮಾಹಿತಿಯನ್ನು ಹೊಂದಿರಬೇಕು. ಗುರಿ, ಆತ್ಮವಿಶ್ವಾಸ ಅತಿ ಅಗತ್ಯ ಎಂದರು.
ಹವ್ಯಾಸಕ್ಕೆ ತಕ್ಕಂತೆ ಪರಿಶ್ರಮ ಪಟ್ಟಾಗ ಯಶಸ್ಸು ನಿಮ್ಮದಾಗುತ್ತದೆ. ಗೌರವ ಸಿಗುತ್ತದೆ. ಒಬ್ಬ ಯಶಸ್ವಿ ಉದ್ಯಮಿಯ ಹಿಂದೆ ತನ್ನದೇ ಆದ ಒಂದು ಕಥೆ ಇರುತ್ತದೆ ಎಂದು ಮಹಾರಾಜ ಗ್ರೂಪ್ ಆಫ್ ಹೋಟೆಲ್ಸ್ (Maharaja Group of Hotels) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೋಮಲ್ ಪ್ರಭು ಹೇಳಿದರು.
ಉದ್ಯಮಿಯಾಗಲು ಮಾರುಕಟ್ಟೆಯ ಬಗ್ಗೆ ಸೃಜನಾತ್ಮಕ ಚಿಂತನೆ ಹಾಗೂ ಯೋಜನೆಗಳನ್ನು ಹೊಂದಿರಬೇಕು. ಶಿಸ್ತುಬದ್ಧ ಯೋಜನೆಯನ್ನು ಮಾತ್ರ ಕಾರ್ಯರೂಪಕ್ಕೆ ತರಲು ಸಾಧ್ಯ. ಯುವ ಪೀಳಿಗೆಯಲ್ಲಿ ಸಾಕಷ್ಟು ಕೌಶಲಗಳಿವೆ. ಆದರೆ ಅದನ್ನು ಉಪಯೋಗಿಸುವ ಕಲೆ ಅವರು ಸಿದ್ಧಿಸಿಕೊಳ್ಳಬೇಕಾಗಿದೆ. ಹಣದಿಂದಲೇ ಯಶಸ್ವಿ ಉದ್ಯಮಿಯಾಗಲು ಸಾಧ್ಯವಿಲ್ಲ. ಶೂನ್ಯದಿಂದಲೂ ಸಾಧನೆ ಸಾಧ್ಯ ಎಂದು ಡಿಟೈಲಿಂಗ್ ಡೆವಿಲ್ಸ್ -ಕಾರ್ ಡಿಟೈಲಿಂಗ್ ಸರ್ವಿಸ್‌ನ (Detailing Devils – Car Detailing Service) ಶಿಲ್ಪ ಘೋರ್ಪಡೆ ಹೇಳಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ಇದನ್ನ ಓದಿ: ಅಲಂಗಾರಿನ ನವೀನ್ ಚಿಂಗ ರಾಷ್ಟ್ರಮಟ್ಟಕ್ಕೆ ಆಯ್ಕೆ
ಯಂಗ್ ಇಂಡಿಯನ್ಸ್ ಮಂಗಳೂರು ಚಾಫ್ಟರ್‌ನ ಅಧ್ಯಕ್ಷೆ ಸಮೀಕ್ಷಾ ಶೆಟ್ಟಿ (Young indians mangaloore chapter), ಉಪಾಧ್ಯಕ್ಷೆ ಸಲೋಮೆ ಲೋಬೊ, ಯಂಗ್ ಇಂಡಿಯನ್ಸ್ ಯುವ- ಅಧ್ಯಕ್ಷ ಶೋಹನ್ ಶೆಟ್ಟಿ ಹಾಗೂ ಶರಣ್ ಶೆಟ್ಟಿ, ಕಾಲೇಜಿನ ನೋಡಲ್ ಅಧಿಕಾರಿ ತನ್ವಿ ರೈ ಹಾಗೂ ನಿತಿನ್ ಕೆಆರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರತೀಕ್ಷಾ ಜೈನ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿನಿ ಹರ್ಷಿಕಾ ಮಂದಿಸಿದರು.