ಮೂಡುಬಿದಿರೆ: ಭಾರತ್ ಸೌಟ್ಸ್-ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕೊನೆಯ ದಿನ ಪುತ್ತಿಗೆ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ವೇದಿಕೆಯಲ್ಲಿ 40 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಏಕಕಾಲಕ್ಕೆ ಬೃಹತ್ ಯೋಗ ಪ್ರಾತ್ಯಕ್ಷಿಕೆ ಹಾಗೂ ಸರ್ವಧರ್ಮ ಪ್ರಾರ್ಥನೆ ನಡೆಯಿತು.
ಮೂಡುಬಿದರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀತಿ ಪಂಡಿತಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮ ಸಾಮರಸ್ಯದಿಂದಿದ್ದಾಗ ದೇಶದ ವಿಕಾಸ ಸಾಧ್ಯ. ಈ ವಿಶ್ವದಲ್ಲಿ ನಮ್ಮ ಇರುವಿಕೆ ಇರುವುದರಿಂದ ವಿಶ್ವದ ಪ್ರತಿಯೊಂದು ಜೀವಿಯ ಮೇಲೆ ಕ್ಷಮೆ, ಕರುಣೆ, ಅನುಕಂಪ, ದಯೆ, ಸಂಯಮ ಮುಂತಾದ ಗುಣಗಳನ್ನು ಹೊಂದಿರಬೇಕು. ಮನುಷ್ಯ- ಮನುಷ್ಯರ ನಡುವೆ ತಾಳ್ಮೆಯಿಂದ ವರ್ತಿಸುವ ರೀತಿಯನ್ನು ಕರಗತ ಮಾಡಿಕೊಂಡಿಲ್ಲ ಇದನ್ನು ಕಲಿತಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ನಿರುಪಯುಕ್ತ ವಸ್ತುಗಳನ್ನು ತೊರೆದು ಉತ್ತಮವಾದದ್ದನ್ನೇ ಯೋಚಿಸೋಣ ಎಂದು ನುಡಿದರು.
ಮಿಲಾಗ್ರೆಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ, ನಿವೃತ್ತ ಪ್ರಾಂಶುಪಾಲ ಫಾದರ್ ಫ್ಯಾನ್ಸಿಸ್ ಗ್ಸೇವಿಯರ್ ಗೋಮ್ಸ್ ಧರ್ಮ ಸಂದೇಶ ನೀಡಿ, ಜಾಂಬೂರಿಯಲ್ಲಿ ಕಲಿತ ಎಲ್ಲಾ ವಿಚಾರಗಳನ್ನು ಕೂಡ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿಯಬೇಕು. ಜಾಂಬೂರಿಯೂ ವಿದ್ಯಾರ್ಥಿಗಳ ಯೋಚನಾ ಕ್ರಮದಲ್ಲಿ, ಸಂಬಂಧಗಳನ್ನು ಬೆಸೆಯುವ ಸಾಮರ್ಥ್ಯದಲ್ಲಿ ಬದಲಾವಣೆಗಳನ್ನು ತಂದಿದ್ದು ಸಮಾಜದಲ್ಲಿರುವ ವಿವಿಧ ಮನಸ್ಥಿತಿಯ ಜನರೊಂದಿಗೆ ಬೆರೆಯಲು ಅವಕಾಶ ಮಾಡಿಕೊಟ್ಟಿದೆ. ನಮ್ಮನ್ನು ನಾವು ಪ್ರೀತಿಸಿದಾಗ ಎಲ್ಲಾ ನಕಾರಾತ್ಮಕ ಭಾವನೆಗಳು ನಮ್ಮಿಂದ ದೂರವಾಗಿ ಸದ್ಭಾವನೆಗಳು ಇಮ್ಮಡಿಕೊಳ್ಳುತ್ತದೆ. ಪ್ರೀತಿಯಿಂದ ಮಾತ್ರ ದ್ವೇಷ, ತಾರತಮ್ಯ, ತಪ್ಪು ತಿಳುವಳಿಕೆ ಮತ್ತು ನೋವನ್ನು ದೂರಗೊಳಿಸಲು ಸಾಧ್ಯ ಎಂದರು.
ಜರುಸಲೆಂ ಅಕಾಡೆಮಿಯ ಸಂಶುಲ್ ಉಲೇಮಾ ಸ್ಮಾರಕದ ಅಧ್ಯಕ್ಷ ಮೌಲಾನ ಹಾಜಿ ಅಬ್ದುಲ್ ಅಝೀಜ್ ಜಾರಿಮೀ ಚಕ್ಕಬೆಟ್ಟು ಧರ್ಮ ಸಂದೇಶ ನೀಡಿ, ಭಗವದ್ಗೀತೆ, ಕುರಾನ್, ಬೈಬಲ್ ಮುಂತಾದ ಧರ್ಮ ಗ್ರಂಥಗಳಲ್ಲಿ ಹಾಗೂ ಬಸವಣ್ಣ, ಬ್ರಹ್ಮಶ್ರೀ ನಾರಾಯಣ ಗುರುಗಳು ಸೇರಿದಂತೆ ಅನೇಕ ಸಮಾಜ ಸುಧಾರಕರು ಮಾನವರೆಲ್ಲರೂ ಒಂದೇ, ವಸುದೈವ ಕುಟುಂಬಕA ಎಂಬ ಸಂದೇಶವನ್ನು ಸಾರಿದ್ದಾರೆ. ಒತ್ತಡದಿಂದ ಪ್ರೀತಿ ಕರುಣೆಯನ್ನು ಪಡೆಯಲು ಸಾಧ್ಯವಿಲ್ಲ ಹಾಗೂ ಸ್ವೀಕರಿಸಲು ಸಾಧ್ಯವಿಲ್ಲ ಆದ್ದರಿಂದ ಎಲ್ಲರನ್ನೂ ಪ್ರೀತಿಯಿಂದ ಗೆಲ್ಲಿ ಎಂದರು.
ಸೌಟ್ಸ್-ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅತಿಥಿಗಳನ್ನು ಗೌರವಿಸಿದರು.
ಭಾರತ್ ಸ್ಕೌಟ್ಸ್-ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂದ್ಯಾ ಅವರು ಧ್ವಜಾವರೋಹಣದ ಮೂಲಕ ಏಳು ದಿನಗಳ ಮೆಗಾ ಕಾರ್ಯಕ್ರಮಕ್ಕೆ ಮುಕ್ತಾಯ ಘೋಷಿಸಿದರು. ಈ ಮೂಲಕ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಸಂಪನ್ನಗೊಂಡಿತು.