News Karnataka
ಕ್ಯಾಂಪಸ್

ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್ ನಲ್ಲಿ ಗಮನಸೆಳೆಯುತ್ತಿದೆ ಪುಷ್ಪಲೋಕ ವೈಭವ

Photo Credit : News Karnataka

ವಿದ್ಯಾಗಿರಿ: ಎಲ್ಲಿ ನೋಡಿದರಲ್ಲಿ ಕೆಂಪು- ಹಳದಿ ಎಂದು ಅರಳಿ ನಿಂತ ಸುಂದರ ಹೂಗಳ ಚಿತ್ತಾರ. ಆನೆ- ಕುದುರೆ, ಚಿಟ್ಟೆಯ ಪ್ರತಿ ರೂಪದಲ್ಲಿ ಅರಳಿದ ಪುಷ್ಪ ಲೋಕ. ನಡೆದಾಡುವ ರಾಜ ಮಾರ್ಗದ ಸುತ್ತಲೂ ಸುಂದರ ಕುಂಡದಲ್ಲಿ ಚೊಕ್ಕವಾಗಿ ಇರಿಸಲ್ಪಟ್ಟ ಘಮ್ಮನೆ ಸುಮ ಬೀರುವ ಗಿಡಗಳು. ಇದು ದೇವತೆಗಳು ನೆಲೆಸಿರುವ ಗಂಧರ್ವ ಲೋಕವೇ ಎನ್ನುವಂತಹ ಭಾವ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ನೆಪದಲ್ಲಿ ಆಳ್ವಾಸ್ ನ ವಿದ್ಯಾಗಿರಿ ಕ್ಯಾಂಪಸ್ ನಲ್ಲಿ ಹೆಜ್ಜೆ ಹಾಕಿದರೆ, ಇದು ಕಾಲೇಜು ಹೌದೋ ಅಲ್ಲವೋ ಎಂದೆನಿಸುವುದು.

ಎ.ಜಿ ಕೊಡ್ಗಿ ಆವರಣದಲ್ಲಿ ಸುಮಾರು 12 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಕೃಷಿ ಮೇಳವಿದ್ದರೆ, ಅದಕ್ಕೆ ಸುಂದರ ಆವರಣವಾಗಿ ಈ ಪುಷ್ಪಾಲಂಕಾರವಿದೆ. ಒಟ್ಟಿನಲ್ಲಿ ಈ ಪ್ರಾಕೃತಿಕ ಸೌಂದರ್ಯ ಮೂಡುಬಿದಿರೆಯ ಬಿರು ಬಿಸಿಲಿನಲ್ಲೂ ಕಣ್ಣಿಗೆ ಮನಸ್ಸಿಗೆ ಮುದ ನೀಡುವುದು ಖಂಡಿತ. ಹಾಗಾಗಿ ನೀವು ಖಂಡಿತವಾಗಿಯೂ ಈ ಪುಷ್ಪಗಿರಿಯ ಮೇಳವನ್ನು ವೀಕ್ಷಿಸಲು ಆಳ್ವಾಸ್ ಕ್ಯಾಂಪಸ್ ಗೆ ಕಾಲಿಡಲೇಬೇಕು.

ಆಳ್ವಾಸ್ ಕ್ಯಾಂಪಸ್ ಗೆ ಪ್ರವೇಶಿಸಿದ ಕೂಡಲೇ ಹೂವಿನ ಬೃಹತ್ ಕಲಾಕೃತಿ ಕಣ್ಣಿಗೆ ಬೀಳುತ್ತದೆ. ಇದರ ಬೆನ್ನತ್ತಿ ಹೋದರೆ ಸುಮಾರು 6.5 ಎಕರೆ ಜಾಗದ ವಿಶಾಲ ಉದ್ಯಾನ ಕಣ್ಣಿಗೆ ಬೀಳುತ್ತದೆ. ಅಲ್ಲದೆ ರಾಜ ಮಾರ್ಗ, ಕಲಾ ಮೇಳ, ಪ್ಯಾಲೇಸ್ ಗ್ರೌಂಡ್ ನಲ್ಲೂ ಇದರ ಪ್ರದರ್ಶನ ಏರ್ಪಡಿಸಲಾಗಿದೆ.

ಇಲ್ಲಿ ಸೀಸನಲ್, ಅಲಂಕಾರಿಕ, ಟಿಶ್ಯು ಕಲ್ಚರ್, ಹೊರಾಂಗಣ ಮತ್ತು ಒಳಾಂಗಣ ಹೀಗೆ ಹಲವು ವಿಭಾಗದ ಹೂಗಳನ್ನು ಪ್ರದರ್ಶನಕ್ಕಿಡಲಾಗಿದೆ. ಎಲ್ಲರ ಗಮನ ಸೆಳೆಯುವುದು ಬೃಹತ್ ಕಲಾಕೃತಿ. ಆನೆ, ನವಿಲು, ಚಿಟ್ಟೆ, ಕುದುರೆ, ಬಾತುಕೋಳಿ, ಮುದ್ದು ಕರಡಿ, ಯಕ್ಷಗಾನದ ಕಿರೀಟ (ಆಳ್ವಾಸ್ ಲೋಗೋ) ಹೀಗೆ ಹಲವು ಗಾತ್ರದ 79 ಕಲಾಕೃತಿಗಳು ನಿಮ್ಮನ್ನು ಬೆರಗುಗೊಳಿಸುತ್ತದೆ.

ಬಿರು ಬಿಸಿಲಿಗೆ ಬಾಡುವ ಕಾರಣ ಈ ಕಲಾಕೃತಿಗಳ ಹೂಗಳನ್ನು ಪ್ರತಿ ಮೂರು ದಿನಕ್ಕೊಮ್ಮೆ ಬದಲಾವಣೆ ಮಾಡಲಾಗುತ್ತದೆ. ಜಾಂಬೂರಿ ಮುಗಿಯುವ ಒಳಗೆ ಒಟ್ಟು ಮೂರು ಬಾರಿ ಕಲಾಕೃತಿಗಳ ಹೂ ತೆಗೆದು ಬೇರೆ ಹೂಗಳನ್ನು ಹಾಕಲಾಗುತ್ತದೆ.

ಜಾಂಬೂರಿಗಾಗಿ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಮೂಡುಬಿದಿರೆಗೆ ಬಂದಿರುವ ವಿದ್ಯಾರ್ಥಿಗಳಿಗೆ ಈ ಹೂ ವನ ಸದ್ಯ ಫೇವರೇಟ್ ಆಗಿದೆ. ಮಕ್ಕಳು, ಯುವಕ ಯುವತಿಯರು ಈ ಪುಷ್ಪ ಕಲಾಕೃತಿಯೆದುರು ನಿಂತು ಸೆಲ್ಫಿ, ಫೋಟೊ ಸೆರೆ ಹಿಡಿಯುತ್ತಿರುವುದು ಕಂಡು ಬಂತು.

News Karnataka

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *