News Karnataka
Thursday, June 01 2023
ಕ್ಯಾಂಪಸ್

ಒತ್ತಡಮುಕ್ತ ಕಲಿಕೆಯಿಂದ ಯಶಸ್ಸು: ನ್ಯಾ. ಎಸ್. ಅಬ್ದುಲ್ ನಜೀರ್

S Abdul Nazir
Photo Credit : NewsKannada

ಮೂಡುಬಿದಿರೆ: ಒತ್ತಡಮುಕ್ತ ಕಲಿಕೆಯಿಂದ ಯಶಸ್ಸು ಸಾಧ್ಯ ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ. ಎಸ್. ಅಬ್ದುಲ್ ನಜೀರ್ ಹೇಳಿದರು. ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ(Alvas Nudisiri) ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಸಂಸ್ಥೆಗಳ 21ನೇ ಪದವಿ ಪ್ರದಾನ ಸಮಾರಂಭದಲ್ಲಿ (21st Graduation Ceremony) ಅವರು ಮಾತನಾಡಿದರು.

‘ಮಾತೆರೆಗ್ಲಾ ಎನ್ನ ನಮಸ್ಕಾರ'(Hello Everyone) ಎಂದು ಮಾತು ಆರಂಭಿಸಿದ ಅವರು, ಪದವಿಯು ನಿಮ್ಮ ಜೀವನದ ಸಾಧನೆಗಳ ಆರಂಭ. ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಹೇಳಿದಂತೆ, ‘ ನಿಮ್ಮ ಸಮಯ ಅಲ್ಪ. ಅದನ್ನು ಇನ್ನೊಬ್ಬರ ಬದುಕಿನಲ್ಲಿ ಕಾಲಹರಣ ಮಾಡಲು ಕಳೆಯಬೇಡಿ. ಇತರರ ಅಭಿಪ್ರಾಯಗಳು ನಿಮ್ಮ ಅಂತಃಸಾಕ್ಷಿಯ ಧ್ವನಿಯನ್ನು ಮುಳುಗಿಸದಿರಲಿ. ನಿಮ್ಮ ಮನಃಸಾಕ್ಷಿಯಂತೆ ಮುನ್ನಡೆಯಿರಿ’ ಎಂದರು

ಇತರರಿಗೆ ಒಳಿತು ಮಾನಡುವುದೇ ಶ್ರೇಷ್ಠ ಜೀವನ. ಇದಕ್ಕೆ ಡಾ.ಎಂ.ಮೋಹನ ಆಳ್ವ ಅವರೇ ಎಲ್ಲರಿಗೆ ಸ್ಫೂರ್ತಿ. ತನ್ನೂರಿನ ಜನತೆಗೆ ಅಗತ್ಯ ಆರೋಗ್ಯ ಸೌಲಭ್ಯ ದೊರಕಿಸುವ ಆಶಯದಿಂದ ಮೂಡುಬಿದಿರೆಯಲ್ಲಿ ಪುಟ್ಟ ಚಿಕಿತ್ಸಾಲಯದೊಂದಿಗೆ ವೃತ್ತಿ ಆರಂಭಿಸಿದರು. ಬಳಿಕ ಆರೋಗ್ಯ ಸೇವೆ ಜೊತೆ ಶಿಕ್ಷಣವನ್ನೂ ಆರಂಭಿಸಿದರು ಎಂದರು.

ವಿಶೇಷ ಮಕ್ಕಳಿಗೆ ಉಚಿತ ಶಾಲೆಯು ಅವರ ಬಹುದೊಡ್ಡ ಸೇವೆ. ಅಲ್ಲದೇ ಪ್ರತಿ ವರ್ಷ ಮೂರು ಸಾವಿರಕ್ಕೂ ಅಧಿಕ ಮಕ್ಕಳಿಗೆ ದತ್ತು ಯೋಜನೆ ಮೂಲಕ ಉಚಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯು ರಾಜ್ಯದಲ್ಲೇ ನಂಬರ್ 1 ಆಗಿದೆ. ಆಡಳಿತ, ಶಿಸ್ತು ಸೇರಿದಂತೆ ಎಲ್ಲ ವಿಷಯಗಳಲ್ಲಿ ಆಳ್ವಾಸ್ ಸಂಸ್ಥೆಯ ಶ್ರೇಷ್ಠತೆಯು ತುಂಬಾ ಖುಷಿ ನೀಡಿದೆ ಎಂದು ಅಭಿನಂದಿಸಿದರು.

ಒಂದು ಬಾರಿ ಶಿಕ್ಷಕರೊಬ್ಬರು ಒಂದು ಹೂಜಿಗೆ ಕಲ್ಲುಗಳನ್ನು ಹಾಕಿದರು. ಬಳಿಕ, ‘ಹೂಜಿ ತುಂಬಿದೆಯೇ?’ ಎಂದು ವಿದ್ಯಾರ್ಥಿಗಳನ್ನು ಕೇಳಿದರು. ಎಲ್ಲರೂ ‘ಹೌದು’ ಎಂದರು. ಬಳಿಕ ಅದಕ್ಕೆ ಸಣ್ಣ ಕಲ್ಲುಗಳನ್ನು ಹಾಕಿದರು. ಅದೂ ಅದರಲ್ಲಿ ತುಂಬಿತು. ಬಳಿಕ ಮರಳನ್ನು ಹಾಕಿದರು. ಅದೂ ಅದರಲ್ಲಿ ತುಂಬಿತು ಎಂದು ಕತೆ ಹೇಳಿದ ಅವರು, ‘ ಜೀವನದಲ್ಲಿ ನೀವೂ ನಿಮ್ಮ ಆದ್ಯತೆಯನ್ನು ಇದೇ ರೀತಿ ನಿರ್ಧರಿಸಬೇಕು. ಕಲ್ಲುಗಳು ನಿಮ್ಮ ಕುಟುಂಬ. ಸಣ್ಣ ಕಲ್ಲುಗಳು ನಿಮ್ಮ ವೃತ್ತಿ ಬದುಕು. ಮರಳು ನಿಮ್ಮ ಅಹಂ ಮತ್ತು ಪ್ರತಿಷ್ಠೆ. ನೀವು ಮರಳನ್ನೇ ಮೊದಲು ಹಾಕಿದ್ದರೆ, ಬಳಿಕ ಹೂಜಿಯಲ್ಲಿ ಬೇರೆ ಏನೂ ಹಾಕಲು ಸಾಧ್ಯವಿಲ್ಲ. ಅದೇ ರೀತಿ ನೀವು ನಿಮ್ಮ ಆದ್ಯತೆಯನ್ನು ಗುರುತಿಸಿ, ಅದಕ್ಕೆ ಶ್ರಮ ಹಾಕಿ. ಅನಗತ್ಯ ವಿಚಾರದಲ್ಲಿ ಸಮಯ ವ್ಯರ್ಥ ಮಾಡಬೇಡಿ ಎಂದರು. ನಿಮ್ಮ ಕನಸಿನೆಡೆಗೆ ಧೈರ್ಯದಿಂದ ಮುನ್ನಡೆಯಿರಿ. ನಿಮ್ಮ ಕಲ್ಪನೆಯ ಬದುಕು ಬದುಕಿ. ಸಾಧನೆಗೆ ತುಂಬಾ ಪರಿಶ್ರಮ ಬೇಕು. ಗುರಿ ಸಾಧಿಸಲು ತ್ಯಾಗ ಅನಿವಾರ್ಯ ಎಂದು ಹೇಳಿದರು .

ಇದನ್ನ ಓದಿ: ಆಳ್ವಾಸ್ ಕಾಲೇಜಿನಲ್ಲಿ ‘ಚಿಣ್ಣರ ಮೇಳ- 2023’ ಉದ್ಘಾಟನೆ; ಮಕ್ಕಳಲ್ಲಿ ಮಡಿವಂತಿಕೆ ಬೇಡ: ಡಾ.ಆಳ್ವ

ಒತ್ತಡದ ಕಲಿಕೆಯೇ ಯಶಸ್ಸು ಎಂಬ ತಪ್ಪು ಗ್ರಹಿಕೆ ಹಲವು ವಿದ್ಯಾರ್ಥಿಗಳಲ್ಲಿದೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯ ಮೂರನೇ ಒಂದು ಭಾಗವನ್ನು ಒತ್ತಡದಲ್ಲಿ ಕಳೆಯುತ್ತಾರೆ. ಒತ್ತಡ ಕಲಿಕೆಯ ಭಾಗವಲ್ಲ. ಭಾರಿ ಕಲಿತಾಗ ಬಳಲುತ್ತೇವೆ ಎಂಬ ತಪ್ಪು ಕಲ್ಪನೆ ಕೆಲವು ವಿದ್ಯಾರ್ಥಿಗಳಲ್ಲಿ ಇದೆ. ಆದರೆ, ಆ ಮೂಲಕ ನೀವು ನಿಮ್ಮ ಕಲಿಕೆಯ ಸಾಮರ್ಥ್ಯ ವನ್ನು ಕುಂಠಿತಗೊಳಿಸುತ್ತೀರಿ. ಒತ್ತಡದ ಬಳಲಿಕೆಯು ನಿಮ್ಮ ಗುರಿ ಸಾಧನೆ ವಿಫಲಗೊಳಿಸುತ್ತದೆ. ಕಡಿಮೆ ಒತ್ತಡದಲ್ಲೂ ಸಾಧನೆ ಮಾಡಬಹುದು ಎಂದರು.

ಕಲಿಕೆಯಿಂದ ಒತ್ತಡ ದೂರ ಇಡಿ. ನೀವು ಏನು ಕಲಿಯುತ್ತೀರಿ? ಎಂಬುದಕ್ಕಿಂತ ಹೇಗೆ ಕಲಿಯುತ್ತೀರಿ? ಎನ್ನುವುದು ಮುಖ್ಯ. ಅದಕ್ಕಾಗಿ ಎಷ್ಟು ಕಲಿಯಬೇಕು? ಎಂಬ ಚಿಂತೆ ಬದಲು, ಕಲಿಕೆಯ ವಿಷಯ ಮೊದಲು ಆಯ್ದುಕೊಳ್ಳಿ ಎಂದು ಅವರು ಸಲಹೆ ನೀಡಿದರು.

ಸ್ಪಷ್ಟತೆ ಬಗ್ಗೆ ಎಚ್ಚರ ವಹಿಸಿ, ಸತತ ಪರಿಶ್ರಮ ಹಾಕಿದರೆ ಯಶಸ್ಸು ಸಾಧ್ಯ. ಸತತ ಅಭ್ಯಾಸದಿಂದ ನಿಖರತೆ ಸಾಧ್ಯ. ಅಭ್ಯಾಸದಿಂದ ವೇಗ ಮತ್ತು ಸ್ಪಷ್ಟತೆ ಸಾಧ್ಯ ಎಂದರು. ಸಮಯ ಇಲ್ಲ ಎನ್ನಬೇಡಿ. ಐನ್ ಸ್ಟೈನ್ (Einstein) ಸೇರಿದಂತೆ ಎಲ್ಲ ಸಾಧಕರಷ್ಟೇ ಸಮಯವೂ ನಿಮಗೆ ನಿಮ್ಮ ಬದುಕಿನಲ್ಲಿ ಸಿಕ್ಕಿದೆ ಎಂದರು. ನೀವು ನಿಮ್ಮ ಕೈಯಲ್ಲಿ ನೀರಿನ ಲೋಟ ಹಿಡಿದುಕೊಂಡಾಗ , ಎಷ್ಟು ಭಾರ ಇದೆ ಎಂಬುದು ಮುಖ್ಯವಲ್ಲ. ನೀವು ಎಷ್ಟು ಹೊತ್ತು ಹಿಡಿದುಕೊಳ್ಳಬೇಕು ಎಂಬುದರ ಮೇಲೆ ಒತ್ತಡ ಅವಲಂಬಿಸಿದೆ ಎಂದು ಉದಾಹರಣೆ ನೀಡಿದರು.

ನಾವು ಏನಾಗಬೇಕು ಎಂದು ಚಿಂತಿಸುತ್ತೇವೆಯೋ? ಅದೇ ಆಗುತ್ತೇವೆ. ಮನುಷ್ಯ ಅವನ ಆಲೋಚನೆಯ ಉತ್ಪನ್ನ ಎಂದು ಮಹಾತ್ಮ ಗಾಂಧಿಯವರು ಹೇಳಿದ್ದಾರೆ ಎಂದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 581, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 390 (Visvesvaraya Technological University) ಹಾಗೂ ಮಂಗಳೂರು ವಿಶ್ವವಿದ್ಯಾಲಯದ (Mangalore University) 1397 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2368 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಅವರ ಪತ್ನಿ ಸಮೀರಾ ನಜೀರ್ ಇದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸ್ವಾಗತಿಸಿದರು. ಆಳ್ವಾಸ್ ಹೋಮಿಯೋಪಾಥಿ ವೈದ್ಯಕೀಯ ಕಾಲೇಜಿನ (Alwas Homeopathy Medical College) ಪ್ರಾಂಶುಪಾಲ ರೋಶನ್ ಪಿಂಟೋ ಪದವಿ ಘೋಷಣೆ ಮಾಡಿದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ರ್ಯಾಂಕ್ ವಿಜೇತರ ಹೆಸರು ವಾಚಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ರಾಜೇಶ್ ಡಿಸೋಜ ನಿರೂಪಿಸಿದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *