ಮೂಡುಬಿದಿರೆ: ಪುತ್ತಿಗೆ ಗ್ರಾಮ(Puthige Village)ಪಂಗೆ ನೀಡಿರುವ ವಿದ್ಯುತ್ ಬಿಲ್ ಗಳಲ್ಲಿ(Electric Bill) ಆಗಿರುವ ಲೋಪ ದೋಷಗಳ ಬಗ್ಗೆ ಪಿಡಿಒ(PDO) ಸಹಿತ ಸದಸ್ಯರು ಮೆಸ್ಕಾಂ ಅಧಿಕಾರಿಗಳನ್ನು(mescom officers) ತರಾಟೆಗೆ ತೆಗೆದುಕೊಂಡಿದ್ದಾರೆ.
ಪುತ್ತಿಗೆ ಗ್ರಾಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ(Praveen Shetty) ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಭವನದಲ್ಲಿ ನಡೆದ ಮೆಸ್ಕಾಂ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
ಕಂಚಿಬೈಲು ಕೊಳವೆಬಾವಿಗೆ ಸಂಬಂಧಿಸಿದಂತೆ ಮಾಸಿಕ ಸರಾಸರಿ 600ರಿಂದ 700 ಯುನಿಟ್ ಇದ್ದು, ಸೆಪ್ಟೆಂಬರ್ ತಿಂಗಳ ಯುನಿಟನ್ನು 14,689 ಎಂದು ಕೊಟ್ಟಿದ್ದಾರೆ. ನಾವು ಪರಿಶೀಲನೆ ಮಾಡುವಾಗ ಸೆಪ್ಟೆಂಬರ್ ತಿಂಗಳ ವಿದ್ಯುತ್ ಯುನಿಟ್ ಹೆಚ್ಚುವರಿ ನೀಡಿದ್ದು ಇದರ ವ್ಯತ್ಯಾಸವನ್ನು ಸರಿಪಡಿಸುವಂತೆ ಹೇಳಿದರೂ ಬದಲಾವಣೆ ಮಾಡಿಲ್ಲವೆಂದು ಪಿಡಿಒ ಭೀಮಾನಾಯ್ಕ್ ಸಭೆಯ ಗಮನಕ್ಕೆ ತಂದರು.
ಪುತ್ತಿಗೆಪದವು ಎಸ್‌ಸಿ ಕಾಲನಿಗೆ ನೀಡಿರುವ ವಿದ್ಯುತ್ ಲೈನ್ ಬದಲಾವಣೆ ಮಾಡದಿರುವ ಬಗ್ಗೆ ಮಾಜಿ ಸದಸ್ಯ ವಾಸುದೇವ ನಾಯಕ್ ಅಧಿಕಾರಿಗಳನ್ನು ಎಚ್ಚರಿಸಿದರು.
ಮಜ್ಜಿಗುರಿ-ಆನಡ್ಕಕ್ಕೆ ಹೊಸದಾಗಿ ಕೊರೆದಿರುವ ಕೊಳವೆ ಬಾವಿಗೆ ಹಾಲಿ ಇರುವ ವಿದ್ಯುತ್ ಸ್ಥಾವರಗಳನ್ನು ಸ್ಥಳಾಂತರಿಸಲು ಸೆಪ್ಟೆಂಬರ್ ತಿಂಗಳಿನಲ್ಲಿ ಪಂಚಾಯಿತಿಯಿAದ ಪತ್ರ ವ್ಯವಹಾರ ಮಾಡಿದರೂ ಸ್ಪಂದನೆ ನೀಡದಿರುವುದರಿಂದ ಮೆಸ್ಕಾಂ ಅಧಿಕಾರಿಯ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ ಎಂದು ಸದಸ್ಯ ದಿನೇಶ್ ಕುಮಾರ್ ತರಾಟೆಗೆ ತೆಗೆದುಕೊಂಡರು. ಎನಿಕ್ರಿಪಲ್ಲ-ಹೆಗ್ಡೆ ಬೆಟ್ಟುವಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಲೈನ್ ಗಳನ್ನು ಬದಲಾವಣೆಗೊಳಿಸದಿರುವ ಬಗ್ಗೆ ಸದಸ್ಯ ಪುರುಷೋತ್ತಮ ನಾಯಕ್ ಅಧಿಕಾರಿಗಳ ಗಮನಕ್ಕೆ ತಂದರು.
ಮೆಸ್ಕಾಂ ಅದಾಲತ್ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ನೀಡದಿರುವ ಬಗ್ಗೆ ಮಾಜಿ ಸದಸ್ಯ ನಾಗವರ್ಮ ಜೈನ್ ಆಕ್ರೋಶ ವ್ಯಕ್ತಪಡಿಸಿದರು.ಶಾಲಾ ಮಕ್ಕಳಿಗೆ ಪರೀಕ್ಷೆಗಳು ಆರಂಭವಾಗುತ್ತಿದೆ ಆದ್ದರಿಂದ ರಾತ್ರಿ ವೇಳೆ ವಿದ್ಯುತ್ ಕಡಿತಗೊಳಿಸಬಾರದೆಂದು ಸದಸ್ಯ ಮುರಳಿ ಸಲಹೆ ನೀಡಿದರು.
ಮಳೆಗಾಲದಲ್ಲಿ ಪುತ್ತಿಗೆ- ಪೆಲತಡ್ಕ-ಕಂಚಿಬೈಲು ಪ್ರದೇಶದ ತೋಡು ಹೊಲಗಳಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದ್ದು ಅಲ್ಲಿನ ಮದಿಮಾಳ್ ಗುಂಡಿ ಬಳಿಯ ಬಾಲಕೃಷ್ಣ ಅವರ ಮನೆಯ ಸಮೀಪದಲ್ಲಿ ವಿದ್ಯುತ್ ತಂತಿಗಳು ನೀರಿಗೆ ಮುಳುಗುತ್ತಿವೆ ಆದ್ದರಿಂದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕಾಗಿದೆ ಈ ಬಗ್ಗೆ ಹಲವು ಬಾರಿ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗದಿರುವ ಬಗ್ಗೆ ಸದಸ್ಯೆ ಸಾರಿಕಾ ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.