ಮೂಡುಬಿದಿರೆ: ಸರ್ಕಾರಿ ಎಲ್ಲಾ ಸೇವೆಗಳು(Government Services) ಮತ್ತು ಸವಲತ್ತುಗಳು ಒಂದೇ ಸೂರಿನಡಿ ಸಿಗಬೇಕೆಂಬ ಉದ್ದೇಶದಿಂದ ಶಿರ್ತಾಡಿ ಜಿಪಂ ಕ್ಷೇತ್ರ(Shirthady district Panchayat) ವ್ಯಾಪ್ತಿಯ ಗ್ರಾಮಸ್ಥರಿಗಾಗಿ ಅಳಿಯೂರಿನ(Aliyoor)ಹೇಮಾ ಸಭಾಭವನದಲ್ಲಿ ಮಂಗಳವಾರ ನಡೆಯಿತು. 338 ಕುಟುಂಬಕ್ಕೆ ಹಕ್ಕುಪತ್ರ ಮತ್ತು 67 ಮಂದಿಗೆ ಪಿಂಚಣಿ ಆದೇಶಪತ್ರವನ್ನು ವಿತರಿಸಲಾಯಿತು.
ಶಾಸಕ ಉಮಾನಾಥ ಎ.ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಳೆದ 4-5 ದಶಕಗಳ ಹಿಂದೆ ಸರ್ಕಾರಿ ಜಾಗದಲ್ಲಿ ಸೂರನ್ನು ನಿರ್ಮಿಸಿ ಕುಳಿತುಕೊಂಡವರಿಗೆ ತಾವು ಸ್ವಂತವಾಗಿ ಸೂರನ್ನು ನಿರ್ಮಿಸಿಕೊಳ್ಳಬೇಕೆಂಬ ಆಸೆ ಇರುತ್ತದೆ. ಆದರೆ ಹಲವಾರು ತಾಂತ್ರಿಕ ದೋಷಗಳಿಂದಾಗಿ ಅದು ಸಾಧ್ಯವಾಗುತ್ತಿರಲಿಲ್ಲ. ಡೀಮ್ಡ್ ಫಾರೆಸ್ಟ್ ನಲ್ಲಿ ಮನೆ ಕಟ್ಟಿ ಕುಳಿತುಕೊಂಡವರ ಬಗ್ಗೆ ಕಂದಾಯ ಇಲಾಖೆಯ ಮೂಲಕ ಸರಿಯಾಗಿ ತನಿಖೆ ನಡೆಸಿ ಡೀಮ್ಡ್ ಫಾರೆಸ್ಟನ್ನು ತೆಗೆದು ಹಾಕುವ ಮೂಲಕ ಹಲವಾರು ಜನರಿಗೆ ಹಕ್ಕುಪತ್ರವನ್ನು ನೀಡುವಂತಹ ಕೆಲಸಗಳು ನಡೆಯುತ್ತಿದ್ದು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಜಿಲ್ಲೆಯಲ್ಲೇ ಅತೀ ಹೆಚ್ಚು ಹಕ್ಕುಪತ್ರ ವಿತರಿಸಿದ ಕ್ಷೇತ್ರ ಎಂಬ ಹೆಗ್ಗಳಿಕೆಯಿದೆ.
ತಾಲೂಕಿಗೆ 145 ಕೋ.ರೂ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯು ಸಿದ್ಧಗೊಂಡಿದ್ದು ಪೈಪ್ ಲೈನ್‌ನ ಕಾಮಗಾರಿಗಳು ನಡೆಯುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಮಾತುಕೊಟ್ಟಂತೆ ಮೂಡುಬಿದಿರೆಗೆ ಸರ್ಕಾರಿ ಪದವಿ ಕಾಲೇಜು ಮತ್ತು ಅಳಿಯೂರಿಗೆ ಪಿಯು ಕಾಲೇಜನ್ನು ತರಲಾಗಿದೆ. ಕಲಾ ವಿಭಾಗ ಮಾತ್ರವಿದ್ದ ಅಳಿಯೂರಿನ ಪಿಯು ಕಾಲೇಜಿಗೆ ಬರುವ ವರ್ಷದಿಂದ ವಾಣಿಜ್ಯ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗಗಳು ಸೇರ್ಪಡೆಗೊಳ್ಳಲಿದೆ ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ದಯಾವತಿ, ಬೆಳುವಾಯಿ ಗ್ರಾಪಂ ಅಧ್ಯಕ್ಷೆ ಸುಶೀಲ, ದರೆಗುಡ್ಡೆ ಗ್ರಾಪಂ ಅಧ್ಯಕ್ಷೆ ತುಳಸಿ ಮೂಲ್ಯ, ಶಿರ್ತಾಡಿ ಗ್ರಾಪಂ ಅಧ್ಯಕ್ಷ ಸಂತೋಷ್ ಕೋಟ್ಯಾನ್, ವಾಲ್ಪಾಡಿ ಗ್ರಾಪಂ ಅಧ್ಯಕ್ಷ ಪ್ರದೀಪ್ ಕುಮಾರ್, ನೆಲ್ಲಿಕಾರು ಗ್ರಾಪಂ ಅಧ್ಯಕ್ಷೆ ಸುಶೀಲಾ, ಮೂಡಾ ಮಾಜಿ ಅಧ್ಯಕ್ಷ ಮೇಘನಾಥ ಶೆಟ್ಟಿ ಉಪಸ್ಥಿತರಿದ್ದರು.
ತಹಸೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಸ್ವಾಗತಿಸಿದರು. ಉಪ ತಹಸೀಲ್ದಾರ್ ರಾಮ್ ಮತ್ತು ತಿಲಕ್ ಕಾರ್ಯಕ್ರಮ ನಿರೂಪಿಸಿದರು.