ಮೂಡುಬಿದಿರೆ: ಮಂಗಳೂರು -ಕಾರ್ಕಳ ರಾಷ್ಟ್ರೀಯ ಹೆದ್ದಾರಿ (Mangalore-Karkala National Highway) 169 ಚತುಷ್ಪಥಗೊಳ್ಳುತ್ತಿದ್ದು ಭೂ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಮಾ. 7ರಂದು ಜಿಲ್ಲಾಧಿಕಾರಿ ಕಚೇರಿ ಮತ್ತು ಭೂಸ್ವಾಧೀನ ಅಧಿಕಾರಿಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ರಾಷ್ಟ್ರೀಯ ಹೆದ್ದಾರಿ ಭೂ ಸಂತ್ರಸ್ತರ ಸಮಿತಿ (National Highway Land Victims Committee) ನಿರ್ಧರಿಸಿದೆ.
ಮಂಗಳವಾರ ಸಮಾಜಮಂದಿರದಲ್ಲಿ ನಡೆದ ಭೂಸಂತ್ರಸ್ತರ ಸಭೆಯಲ್ಲಿ ಈ ಕುರಿತು ಕ್ರಮ ಕೈಗೊಳ್ಳಲಾಯಿತು.
ಇದನ್ನ ಓದಿ: ಮೂಡುಬಿದಿರೆ ಪ್ರವಾಸಿ ಬಂಗಲೆ ಕೆಡವಲು ಹುನ್ನಾರ; ಕೆ.ಅಭಯಚಂದ್ರ ಜೈನ್ ಆರೋಪ
ಸಮಿತಿಯ ಅಧ್ಯಕ್ಷೆ ಮರಿಯಮ್ಮ ಥೋಮಸ್ ಮಾತನಾಡಿ, ರಾಜ್ಯ ಹೈಕೋರ್ಟ್ (State High Court) ಮೂರು ಗ್ರಾಮಗಳ ಪರವಾಗಿ ನೀಡಿದ ತೀರ್ಪನ್ನು ಪ್ರಶ್ನಿಸಿ ಮತ್ತೆ ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸುವ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ನಡೆಯು ಸಂತ್ರಸ್ತರಿಗೆ ಪರಿಹಾರ ಒದಗಿಸಲು ವಿಳಂಬ ತಂತ್ರ ಅನುಸರಿಸುವ ಹುನ್ನಾರವಾಗಿದೆ. ಈ ರೀತಿಯ ವಿಳಂಬ ನೀತಿಯನ್ನು ಅನುಸರಿಸಿ ಭೂಸಂತ್ರಸ್ತರಿಗೆ ತೊಂದರೆ ನೀಡುವುದಲ್ಲದೆ ಹೆದ್ದಾರಿ ಕಾಮಗಾರಿಯು ಸರಾಗವಾಗಿ ನಡೆಯದಂತೆ ಮಾಡುತ್ತಿರುವುದು ಕಳವಳಕಾರಿಯಾಗಿದೆ ಎಂದರು.
ಹೋರಾಟ ಸಮಿತಿಯ ಕೋಶಾಧಿಕಾರಿ ರತ್ನಾಕರ ಶೆಟ್ಟಿ, ತೋಡಾರಿನ ಅಶ್ವಿನಿ ನಾಯಕ್, ಜಯರಾಮ ಭಟ್, ಬೆಳುವಾಯಿ ಸದಾಶಿವ ಶೆಟ್ಟಿ (Beluvai Sadashiva Shetty), ಮತ್ತಿತರರು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಂದ ಆಗುತ್ತಿರುವ ತೊಂದರೆಗಳ ಕುರಿತು ಮಾತನಾಡಿದರು.ವೇದಿಕೆಯಲ್ಲಿ ಸಮಿತಿಯ ಸದಸ್ಯರಾದ ಜಯರಾಂ ಪೂಜಾರಿ, ನರಸಿಂಹ ಕಾಮತ್, ಪ್ರೇಮಲತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.