ಮೂಡುಬಿದಿರೆ: ಪುತ್ತಿಗೆ ಗ್ರಾಪಂ ಪಂಚಾಯಿತಿ (Puttige Gram Panchayat) ವ್ಯಾಪ್ತಿಯಲ್ಲಿ ದೊಡ್ಡದಿದ್ದು, ಪಂಚಾಯಿತಿಯಲ್ಲಿ ಪ್ರಮುಖ ಹುದ್ದೆಗಳು ಖಾಲಿ ಇರುವುದರಿಂದ ಗ್ರಾಮಸ್ಥರ ಕೆಲಸಗಳು ಸೂಕ್ತ ಸಮಯದಲ್ಲಿ ಆಗುತ್ತಿಲ್ಲ ಎಂದು ಮಂಗಳವಾರ ನಡೆದ ಪುತ್ತಿಗೆ ಗ್ರಾಮಸಭೆಯಲ್ಲಿ ಮಾಜಿ ಸದಸ್ಯರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸದಸ್ಯ ನಾಗವರ್ಮ ಜೈನ್ ಈ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿ, ಪಂಚಾಯಿತಿಯಲ್ಲಿ ಕಾರ್ಯದರ್ಶಿ ಇಲ್ಲ. ಅವರ ಕೆಲಸವನ್ನು ಈಗ ಇರುವ ಅಕೌಂಟೆಟ್ (Accountant) ಅವರು ವಾರದಲ್ಲಿ ಮೂರು ದಿನಗಳು ತಾಲೂಕು ಪಂಚಾಯಿತಿಯಲ್ಲಿ ಪ್ರಭಾರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಮುಖ ಸಿಬ್ಬಂದಿಗಳ ಹುದ್ದೆ ಖಾಲಿ ಇರುವುದರಿಂದ ಗ್ರಾಮಸ್ಥರ ಕೆಲಸಗಳು ವಿಳಂಭವಾಗುತ್ತಿದೆ ಎಂದರು. ಈ ಕುರಿತು ಶಾಸಕರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಾಣಾಧಿಕಾರಿ, ತಾಲೂಕು ಪಂಚಾಯಿತಿ ಅವರಿಗೆ ಪತ್ರ ಬರೆಯಲಾಗುವುದು ಎಂದು ಪಿಡಿಒ ಭೀಮಾ ನಾಯ್ಕ್ ತಿಳಿಸಿದರು.
ಕೊಡ್ಯಡ್ಕದಲ್ಲಿ ರಸ್ತೆ ಕಾಮಗಾರಿಯು (Road works in Kodydaka) ರಾಜಕೀಯ ಉದ್ದೇಶಕ್ಕಾಗಿ ಸ್ಥಗಿತಗೊಳಿಸಲಾಗಿದೆ. ಪಂಚಾಯಿತಿಯಲ್ಲಿ ಪಕ್ಷಬೇಧ ಮಾಡುವುದು ಸರಿಯಲ್ಲ. ಅಭಿವೃದ್ಧಿ ಕೆಲಸಕ್ಕೆ ಪಕ್ಷದ ವಿಚಾರಗಳು ತಡೆ ಮಾಡಬಾರದು ಎಂದು ಮಾಜಿ ಅಧ್ಯಕ್ಷ ಶಶಿಧರ್ ನಾಯಕ್ ಪಂಚಾಯಿತಿ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಸದಸ್ಯ ದಯಾನಂದ್, ಮಾಜಿ ಸದಸ್ಯರಾದ ಶಶಿಧರ ಅಂಚನ್, ನಾಗರಾಜ್ ಧ್ವನಿಗೂಡಿಸಿದರು. ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದಾಗಿ (Poor workmanship) ಕೆಲಸ ನಿಂತಿದೆ ಎಂದು ಸದಸ್ಯ ಮುರಳಿ ಸಮಜಾಯಿಸಿದರು.
ಒಂಟಿಕಟ್ಟೆ ಬಳಿ ಪಂಚಾಯಿತಿ ಕಾರ್ಯಾಲಯಕ್ಕೆ ಬರುವ ರಸ್ತೆಯ ಪಕ್ಕ ಇರುವ ಮದ್ಯದಂಗಡಿ, ಕೋಳಿ ಅಂಗಡಿಗಳ ಮುಂದೆ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುತ್ತಿರುವುದನ್ನು ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ ಎಂದು ನಾಗವರ್ಮ ಜೈನ್ ತಿಳಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಂಪು ಕಲ್ಲಿನ ಕ್ವಾರಿಗಳು ಹೆಚ್ಚಾಗುತ್ತಿದೆ. ಕಿರಿದಾದ ರಸ್ತೆಗಳಲ್ಲಿ ಲಾರಿಗಳು ಸಂಚರಿಸುತ್ತಿರುವುದು, ನಿಗಧಿಯಲ್ಲದ ಸಮಯದಲ್ಲಿ ಕ್ವಾರಿಗಳು ಕಾರ್ಯಾಚರಿಸುತ್ತಿರುವುದರಿಂದ ಪರಿಸರದವರಿಗೆ ತೊಂದರೆಯಾಗುತ್ತಿದೆ. ಅನಧಿಕೃತ ಕ್ವಾರಿಗಳನ್ನು ನಿಲ್ಲಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಕ್ವಾರಿಯವರಿಗೆ ಎಚ್ಚರಿಕೆ ನೀಡಲಾಗುವುದು ಎಂದು ಅಧ್ಯಕ್ಷ ಪ್ರವೀಣ್ ಶೆಟ್ಟಿ ಭರವಸೆಯಿತ್ತರು.
ಇದನ್ನ ಓದಿ: ಪುತ್ತಿಗೆಯ ನವೀಕೃತ ನೂರಾನಿ ಮಸೀದಿಯಲ್ಲಿ ನಮ್ಮೂರ ನೋಡಬನ್ನಿ ಕಾರ್ಯಕ್ರಮ
ನೀರಿನ ವ್ಯವಸ್ಥೆ, ಮೆಸ್ಕಾಂ ಇಲಾಖೆಯ (Water System, Department of Mescom) ಸಮಸ್ಯೆ ಸಹಿತ ಹಲವು ವಿಚಾರಗಳನ್ನು ಸಬೆಯಲ್ಲಿ ಚರ್ಚಿಸಲಾಯಿತು.
ಉಪಾಧ್ಯಕ್ಷೆ ಶಾಯಿರಭಾನು, ಪ್ರಭಾರ ಕಾರ್ಯದರ್ಶಿ ಶ್ರೀಧರ್ ಉಪಸ್ಥಿತರಿದ್ದರು.