ಮೂಡುಬಿದಿರೆ: ಕಂಬಳ(Kambala) ಕ್ರೀಡೆಯಲ್ಲಿ ವೇಗದ ಓಟಗಾರನೆಂದು ಹೆಗ್ಗಳಿಕೆ ಪಾತ್ರವಾಗಿರುವ ಮೂಡುಬಿದಿರೆ ಅಶ್ವತ್ಥಪುರದ ಶ್ರೀನಿವಾಸ ಗೌಡ(Shrinivasa gowda)ಹಿಂದೆ ತೆಲುಗು(Thelug), ಸದ್ಯ ತುಳು(Thulu) ಹಾಗೂ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
2017ರಲ್ಲಿ ತೆರೆಕಂಡ ಬಾಹುಬಲಿ 2(Bahubali 2) ತೆಲುಗು ಸಿನಿಮಾದ ದೃಶ್ಯವೊಂದರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಶ್ರೀನಿವಾಸ ಗೌಡರು, ಸಧ್ಯ ಕಂಬಳ ಕಥಾಹಂದರ ಹೊಂದಿರುವ `ಬಿರ್ದ್ದ ಕಂಬಳ’ (Birduda Kambula)ತುಳು ಹಾಗೂ `ವೀರ ಕಂಬಳ'(Veera Kambala) ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ಎರಡನೇ ನಾಯಕನಾಗಿ ನಟನಾಗಿ ಅಭಿನಯಿಸಿದ್ದಾರೆ. ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿರುವ, ಅರುಣ್ ರೈ ತೋಡಾರು ನಿರ್ಮಾಣದ ಚಲನಚಿತ್ರಕ್ಕೆ ತುಳು ಸಿನಿಮಾ, ನಾಟಕ ನಿರ್ದೇಶಕ ವಿಜಯಕುಮಾರ್ ಚಿತ್ರಕಥೆ ಬರೆದಿದ್ದಾರೆ.
ಸಿನಿಮಾಗಳ ಕಂಬಳ ಲಿಂಕ್
ಬಾಹುಬಲಿ 2 ಸಿನಿಮಾದಲ್ಲಿ ಗೂಳಿ ಓಡಿಸುವ ದೃಶ್ಯದಲ್ಲಿ ಕಾಣಿಸಿಕೊಂಡ ಶ್ರೀನಿವಾಸ ಗೌಡರು ಆ ಸಮಯದಲ್ಲಿ ಕಂಬಳದ ಎ ಗ್ರೇಡ್ ಓಟಗಾರರಾಗಿದ್ದರು. ಗೂಳಿ (Buffalo)ಓಡಿಸುವ ದೃಶ್ಯಕ್ಕೆ ತರಬೇತಿ ನೀಡಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 10 ಓಟಗಾರರಲ್ಲಿ ಅವರು ಒಬ್ಬರು. ಗೂಳಿಗಳನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಪಳಗಿಸುತ್ತಿದ್ದ ಗೌಡರನ್ನು ಆ ದೃಶ್ಯಕ್ಕೆ ಆಯ್ಕೆ ಮಾಡಲಾಯಿತು. ಇನ್ನು ಚಿತ್ರೀಕರಣ ಹಂತದಲ್ಲಿರುವ ಬಿರ್ದ್ದ ಕಂಬಳ, ವೀರ ಕಂಬಳ ಸಿನಿಮಾದಲ್ಲೂ ಶ್ರೀನಿವಾಸ ಗೌಡರು ಕಂಬಳ ಓಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂರು ಸಿನಿಮಾಗಳಲ್ಲೂ ಓಟಗಾರನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಕೋಣಗಳನ್ನು ಓಡಿಸುವುದಕ್ಕಿಂತ ಸಿನೆಮಾದಲ್ಲಿ ಪಾತ್ರ ಮಾಡುವುದು ಬಹಳ ಕಷ್ಟ. ತುಳು ಚಿತ್ರರಂಗದ ದಿಗ್ಗಜರಾದ ನವೀನ್ ಡಿಪಡೀಲ್(Naveen D Padil), ಬೋಜರಾಜ ವಾಮಂಜೂರು(Bhojaraja Vamanjoor) ಅವರ ಸಹಕಾರದಿಂದಾಗಿ ಪಾತ್ರ ಮಾಡಲು ಸುಲಭವಾಯಿತು.ತೆಲುಗು ಸಿನಿಮಾದಲ್ಲೂ ಕಾಣಿಸಿಕೊಂಡಿರುವುದಕ್ಕೆ ಖುಷಿ ಇದೆ. ಇಂದು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮುಖ್ಯ ಕಾರಣ ಕಂಬಳ ನನ್ನ ಮೇಲೆ ಬೀರಿರುವ ಪ್ರಭಾವ.
– ಶ್ರೀನಿವಾಸ ಗೌಡ, ಕಂಬಳದ ದಾಖಲೆಯ ಓಟಗಾರ