ಮೂಡುಬಿದಿರೆ: ಬಂಟರ ಸಂಘ ಮೂಡುಬಿದಿರೆ ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಹೊಟೇಲ್ ಪಂಚರತ್ನ ಸಭಾಭವನದಲ್ಲಿ ನಡೆಯಿತು.
ಮಂಗಳೂರಿನ ಡಾ.ಆಶಾಜ್ಯೋತಿ ರೈ ಮಾಲಾಡಿ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ನೆರವೇರಿಸಿದರು. ಸಂಘವು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕಾಗಿದೆ. ಆಚರಣೆಗಳು ಕೇವಲ ವೇದಿಕೆಗೆ ಮಾತ್ರ ಸೀಮಿತವಾಗದಿರಲಿ. ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಎಲ್ಲರೂ ಸಾಂ,ಘಿಕವಾಗಿ ಉತ್ತಮ ಕೆಲಸಗಳನ್ನು ಮಾಡಿ ಎಂದು ಶುಭ ಹಾರೈಸಿದರು.
ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಕಾಲದಲ್ಲಿ ನಾವು ಕೂಡು ಕುಟುಂಬದ ವ್ಯವಸ್ಥೆಯಲ್ಲಿದ್ದು ಅಲ್ಲಿ ನಾವು ದಾರಿ ತಪ್ಪಿದಾಗ ಸರಿಮಾಡುವವರಿದ್ದರು. ಆದರೆ ಇಂದು ಕೂಡು ಕುಟುಂಬದ ವ್ಯವಸ್ಥೆ ತಪ್ಪಿದ್ದು ಯಾರೂ ಮಾರ್ಗದರ್ಶನ ನೀಡುವವರಿಲ್ಲ ಎಂಬ ಸ್ಥಿತಿಯಲ್ಲಿರುವಾಗ ಇಂತಹ ಸಂಘಗಳ ಅಗತ್ಯವಿದೆ. ಕೇವಲ ದುಡ್ಡಿನಿಂದಲೇ ಎಲ್ಲಾ ಕೆಲಸಗಳು ಆಗುತ್ತವೆ ಎಂಬುದು ಸರಿಯಲ್ಲ. ದುಡ್ಡೂ ಬೇಕು ಕೊಡುವ ಮನಸ್ಸೂ ನಮ್ಮದಾಗಿರಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಗೊಳ್ಳಲು ಐಎಎಸ್, ಐಪಿಎಸ್ ನಂತಹ ಪರೀಕ್ಷೆಗಳನ್ನು ಬರೆಯಲು ಪ್ರೇರೆಪಿಸುವಂತಹ ಕೆಲಸಗಳನ್ನು ಮಾಡಬೇಕಾಗಿದೆ ಎಂದರು.
ಬಜ್ಪೆ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೊ.ಅಕ್ಷಯ ಆರ್.ಶೆಟ್ಟಿ ಪ್ರೇರಕ ಭಾಷಣಗೈದರು.ನೂತನ ಅಧ್ಯಕ್ಷೆ ಶೋಭಾ ಎಸ್.ಹೆಗ್ಡೆ ಅಧಿಕಾರವನ್ನು ಸ್ವೀಕರಿಸಿ, ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿ, ತಮ್ಮ ಸಮಾಜದಲ್ಲಿರುವ ದುರ್ಬಲ ವರ್ಗದವರಿಗೆ ಆರ್ಥಿಕ ಸಹಕಾರ, ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ ಹಾಗೂ ವಸತಿ ವಂಚಿತರನ್ನು ಗುರುತಿಸಿ ಸಹಕಾರ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶವನ್ನು ಹೊಂದಿದ್ದೇವೆ ಹಾಗೂ ತನ್ನ ಮೊದಲ ಸೇವಾ ಯೋಜನೆಯಾಗಿ, ಸಮಾಜದ 10 ಜನ ಯುವಕರಿಗೆ ಉಚಿತವಾಗಿ ಡ್ರೈವಿಂಗ್ ತರಬೇತಿಯನ್ನು ನೀಡುವುದಾಗಿ ತಿಳಿಸಿದರು.
ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮೂಡುಬಿದಿರೆ ಮಹಿಳಾ ಘಟಕದ ಗೌರವಾಧ್ಯಕ್ಷ ಜಯಶ್ರೀ ಅಮರನಾಥ ಶೆಟ್ಟಿ, ಕಾಂತಿಲತಾ ಟಿ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಾತೃ ಸಂಘದ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಕೋಶಾಧಿಕಾರಿ ಪುರುಷೋತ್ತಮ ಶೆಟ್ಟಿ ಎಂ., ತೋಡಾರು ದಿವಾಕರ ಶೆಟ್ಟಿ, ನೂತನ ಕೋಶಾಧಿಕಾರಿ ಗೀತಾ ಪಿ.ಶೆಟ್ಟಿ ಉಪಸ್ಥಿತರಿದ್ದರು.
ಕೆಎಂಎಫ್ ನ ದ.ಕ.ಜಿಲ್ಲಾ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಸ್ವಾಗತಿಸಿದರು. ಪ್ರಫುಲ್ಲಾ ಎ.ಶೆಟ್ಟಿ ಪದಗ್ರಹಣ ಅಧಿಕಾರಿ ಡಾ.ಆಶಾಜ್ಯೋತಿ ರೈ ಮಾಲಾಡಿ ಅವರನ್ನು ಮತ್ತು ಅನಿತಾ ಶೆಟ್ಟಿ ಅವರು ಪ್ರೊ.ಅಕ್ಷಯ ಆರ್ ಶೆಟ್ಟಿಯನ್ನು ಪರಿಚಯಿಸಿದರು. ಲಯನ್ ಶಿವಪ್ರಸಾದ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಸೌಮ್ಯ ಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.