ಮೂಡುಬಿದಿರೆ: ಪುತ್ತಿಗೆಯ ನವೀಕೃತ ನೂರಾನಿ ಮಸೀದಿಗೆ (Updated Noorani Masjid) ಸರ್ವಧರ್ಮೀಯರು ಸಂದರ್ಶಿಸುವ `ನಮ್ಮೂರ ಮಸೀದಿ ನೋಡಬನ್ನಿ’ ಕಾರ್ಯಕ್ರಮ ಭಾನುವಾರ ನಡೆಯಿತು.
ಅನಾರೋಗ್ಯಪೀಡಿತರಿಗೆ ಸಹಾಯಧನ ವಿತರಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ (Mahalingeshwar Temple) ಪ್ರಧಾನ ಅರ್ಚಕ ಈಶ್ವರ ಭಟ್ ಮಾತನಾಡಿ ವ್ಯಕ್ತಿಯನ್ನು ಆತನ ಜಾತಿ, ಧರ್ಮದ ಆಧಾರದಲ್ಲಿ ಗುರುತಿಸುವ ಬದಲು ಆತನ ಪ್ರಾಮಾಣಿಕತೆಯ ಅಧಾರದಲ್ಲಿ ಗುರುತಿಸಬೇಕು. ದೇವರ ಕಾರ್ಯಗಳಿಗೆ ಪ್ರಾಮಾಣಿಕತೆ ಮುಖ್ಯ. ಜಾತಿ, ಧರ್ಮಕ್ಕಾಗಿ ಕಿತ್ತಾಡುವುದನ್ನು ಬಿಟ್ಟು ಕೋಮು ಸಾಮರಸ್ಯದಿಂದ ಜೀವನ ನಡೆಸಿದರೆ ಸಮೃದ್ಧ ಭಾರತವನ್ನು ಕಟ್ಟಬಹುದು ಎಂದರು.
ಶಾಸಕ ಉಮಾನಾಥ ಕೋಟ್ಯಾನ್ (MLA Umanatha Kotyan) ಮಾತನಾಡಿ, ಮನುಷ್ಯ ಧರ್ಮ ಎಲ್ಲಾ ಧರ್ಮಕ್ಕಿಂತಲೂ ಶ್ರೇಷ್ಠವಾದದ್ದು. ಇನ್ನೊಬ್ಬರಿಗೆ ಉಪಕಾರ ಮಾಡದಿದ್ದರೂ ರ‍್ವಾಗಿಲ್ಲ ತೊಂದರೆ ಮಾಡಬಾರದು ಎಂದು ಹೇಳಿದರು. ನನ್ನ ಅಧಿಕಾರವಧಿಯಲ್ಲಿ ಜಾತಿ ಧರ್ಮವನ್ನು ಮೆಟ್ಟಿ ನಿಂತು ಕೆಲಸ ಮಾಡಿದ್ದೇನೆ ಎಂದರು.
ಪಕ್ಷಿಕೆರೆ ಸಂತ ಜೂಜರ ಧರ್ಮಕೇಂದ್ರದ ಮೆಲ್ವಿನ್ ನೊರೊನ್ಹಾ, ಮಾಜಿ ಸಚಿವ ಅಭಯಚಂದ್ರ ಜೈನ್, ಹಿರಿಯ ಪತ್ರಕರ್ತ ಅಬ್ಬುಸಲಾಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪುತ್ತಿಗೆ ನೂರಾನಿ ಮಸೀದಿ ಅಧ್ಯಕ್ಷ ಅಬುಲ್ ಅಲಾ ಪುತ್ತಿಗೆ ಮತ್ತಿತರರು ಉಪಸ್ಥಿತರಿದ್ದರು.
ಮಹ್ಮದ್ ಶರಾಸ್, ಜಯಂತಿ ಮತ್ತು ಸ್ಟಾನಿ ಪ್ರಕಾಶ್ ಡಿಸೋಜ ಅವರಿಗೆ ಆರ್ಥಿಕ ನೆರವು ನೀಡಲಾಯಿತು. ಮಸೀದಿ ಕಾರ್ಮಿಕನಾಗಿ ದುಡಿಯುತ್ತಿರುವ ವಿಕಲಚೇತನ ರಾಮ್‌ಜನಾಮ್ ಎಂಬವರಿಗೆ ನಡೆದಾಡಲು ಸಹಾಯವಾಗುವ ಸಾಧನ ಹಾಗೂ ಆನಂದ್ ಎಂಬವರಿಗೆ ಸೈಕಲನ್ನು ನೀಡಲಾಯಿತು.
ಇದನ್ನ ಓದಿ: ಬಲಿಪ ಭಾಗವತ, ಅಂಬಾತನಯ ಮುದ್ರಾಡಿಯವರಿಗೆ ಶ್ರದ್ಧಾಂಜಲಿ
ಪುತ್ತಿಗೆ ಮಸೀದಿಯ ಖತೀಬರಾದ ಮೌಲಾನಾ ಝಿಯಾವುಲ್ಲಾ ಖಾನ್ (Khateeba Maulana Ziaullah Khan), ಪಳಕಳ ಮಿತ್ರಮಂಡಳಿ ಅಧ್ಯಕ್ಷ ರವಿಶಂಕರ್ ಭಟ್, ಪುತ್ತಿಗೆ ಗ್ರಾಮ ಪಂ, ಸದಸ್ಯ ಮಹ್ಮದ್ ಶರೀಫ್ ಮತ್ತಿತರರು ಉಪಸ್ಥಿತರಿದ್ದರು. ಶೈಖ್ ಇಕ್ಬಾಲ್ ಸ್ವಾಗತಿಸಿದರು. ಉಪನ್ಯಾಸಕ ಮಹ್ಮದ್ ಮುಫೀಝ್ ನಿರೂಪಿಸಿದರು. ಮಹ್ಮದ್ ಕರೀಂ ವಂದಿಸಿದರು.