ಮೂಡುಬಿದಿರೆ: ತಾಲೂಕು ಕಚೇರಿ ಸೇರಿದಂತೆ ಮೂಡುಬಿದಿರೆಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ವಿಪರೀತವಾಗುತ್ತಿದ್ದು, ಇದನ್ನು ವಿರೋಧಿಸಿ ಬ್ಲಾಕ್ ಕಾಂಗ್ರೆಸ್ (Block Congress) ವತಿಯಿಂದ ಬುಧವಾರ ಬೆಳಗ್ಗೆ ಗಂಟೆ 10ಕ್ಕೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ (Former Minister Abhay Chandra Jain) ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಲೂಕು ಕಚೇರಿ, ಸರ್ವೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಜನಸಾಮಾನ್ಯರ ಅರ್ಜಿಗಳಿಗೆ ಸ್ಪಂದನೆ ಸಿಗದೆ ತಿಂಗಳುಗಟ್ಟಲೆ, ವರ್ಷಗಟ್ಟಲೆ ಬಾಕಿ ಉಳಿದುಕೊಂಡಿವೆ. ಹಣಕೊಟ್ಟವರ ಕೆಲಸವನ್ನು ಬೇಗ ಮಾಡಿಕೊಡಲಾಗುತ್ತದೆ. ಭ್ರಷ್ಟಾಚಾರ ಹೆಚ್ಚುತ್ತಿದ್ದು ಅಧಿಕಾರಿಗಳು, ನೌಕರರು ಜನರೊಂದಿಗೆ ಸೌಜನ್ಯದಿಂದ ವರ್ತಿಸುವುದನ್ನು ಮರೆತಿದ್ದಾರೆ. ನನ್ನ 20 ವರ್ಷದ ಶಾಸಕತ್ವದ ಅವಧಿಯಲ್ಲಿ ವಾರಕ್ಕೊಮ್ಮೆ ವಿವಿಧ ಇಲಾಖೆಗಳಿಗೆ ದಿಢೀರ್ ಭೇಟಿಕೊಟ್ಟು ಅಧಿಕಾರಿಗಳಿಗೆ ಬಿಸಿಮುಟ್ಟಿಸುತ್ತಿದ್ದೆ. ಈಗಿನ ಶಾಸಕರು ಇಂತಹ ಕೆಲಸ ಮಾಡದೆ ಇದ್ದುದರಿಂದ ಜನರ ಕೆಲಸಗಳು ವಿಳಂಬವಾಗುತ್ತಿದ್ದು ಭ್ರಷ್ಟಾಚಾರ ಹೆಚ್ಚಾಗಲು ಕೂಡ ಕಾರಣವಾಗಿದೆ ಎಂದು ಆರೋಪಿಸಿದರು.
ಇದನ್ನ ಓದಿ: ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮೂಡುಬಿದಿರೆ ಸರ್ಕಾರಿ ನೌಕರ ಸಂಘದಿಂದ ಬೆಂಬಲ
ಶಾಸಕರ ಪ್ರೋತ್ಸಾಹದಿಂದ ತಾಲೂಕಿನಾದ್ಯಂತ ಮರಳು ದಂಧೆ (Sand trade) ಕೂಡ ಹೆಚ್ಚುತ್ತಿದೆ. ಆಡಳಿತಸೌಧ (Administrative building) ಸಹಿತ ವಿವಿಧ ಪ್ರಮುಖ ಕಟ್ಟಡಗಳ ಗುತ್ತಿಗೆಯನ್ನು ಶಾಸಕರ ಸಂಬಂಧಿ ಗುತ್ತಿಗೆದಾರರಿಗೆ ಮಾತ್ರ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ (Bloc Congress President Valerian Sequeira), ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಸುದ್ದಿಗೋಷ್ಠಿಯಲ್ಲಿದ್ದರು.