ಮೂಡುಬಿದಿರೆ: ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ(Moodubidre-Karkala Highway) ಹಾದು ಹೋಗುವ ಬೆಳುವಾಯಿ(Beluvayi)ಪಂಚಾಯಿತಿ ಎದುರುಗಡೆ ರಸ್ತೆಯಲ್ಲಿ ಓಮ್ನಿ ಕಾರು(Omni car) ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ಇಬ್ಬರು ಯುವಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಟಿವಿಎಸ್ ಫೈನಾನ್ಸ್ ಕಂಪೆನಿಯ(TVS Finance Company) ಮೆನೇಜರ್ ಮೂಡುಬಿದಿರೆಯ ಆದರ್ಶ್(38) ಮತ್ತು ಅದೇ ಕಂಪೆನಿಯ ಉದ್ಯೋಗಿ ಕುಕ್ಕುಂದೂರಿನ ನಿತೇಶ್(30) ಗಾಯಗೊಂಡವರು. ಕಂಪೆನಿಯ ಕಾರ‍್ಯನಿಮಿತ್ತ ಇವರಿಬ್ಬರು ಕಾರ್ಕಳಕ್ಕೆ ಹೋಗಿದ್ದು ಅಲ್ಲಿಂದ ಮಧ್ಯಾಹ್ನ ಬೈಕ್‌ನಲ್ಲಿ ಮೂಡುಬಿದಿರೆಗೆ ವಾಪಾಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಈ ಸಂದರ್ಭ ನಿತೇಶ್ ಬೈಕ್ ಚಲಾಯಿಸುತ್ತಿದ್ದು ಆದರ್ಶ ಹಿಂಬದಿ ಸವಾರರಾಗಿದ್ದ ಎನ್ನಲಾಗಿದೆ. ಇಬ್ಬರು ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಓಮ್ನಿ ವಾಹನ ಉಳ್ಳಾಲದ್ದು ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಲಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಯಾರೂ ಮುಂದೆ ಬಾರದಿದ್ದಾಗ ಅದೇ ಹೊತ್ತಿಗೆ ಕಾರ್ಕಳದಿಂದ ಮೂಡುಬಿದಿರೆ ಕಡೆ ಬರುತ್ತಿದ್ದ ಜೈನ್ ಬಸ್ ಚಾಲಕ ಮಹ್ಮದ್ ಇಸ್ಮಾಯಿಲ್ ಹಂಡೇಲು ಮತ್ತು ಕಂಡಕ್ಟರ್ ಅಫ್ರೀದ್ ಗಾಯಾಳುಗಳನ್ನು ಬಸ್ಸಿನಲ್ಲಿ ಆಸ್ಪತ್ರೆಗೆ ಕರೆತಂದು ಮಾನವೀಯತೆ ಮೆರೆದಿದ್ದಾರೆ.