ಮಹಡಿ ಮೇಲೆ ಇಬ್ಬರು ಮಹಿಳೆಯರು ನಿಂತಿರುತ್ತಾರೆ. ಅಷ್ಟರಲ್ಲಿ ಯಾರೊದೊ ಮದುವೆ ದಿಬ್ಬಣ ಬರತ್ತಾ ಇರುತ್ತದೆ. ದಿಬ್ಬಣದ ಹಾಡಿಗೆ ನಿಂತಲ್ಲಿಯೇ ಕಾಲು ಕುಣಿಸಲು ಶುರುಮಾಡುತ್ತಾರೆ. ಸ್ವಲ್ಪದರಲ್ಲಿಯೇ ತುಂಬಿದ ಜನಜಂಗುಳಿಯ ಮಧ್ಯೆ ಈ ಇಬ್ಬರು ಮಹಿಳೆಯರು ಕುಣಿಯಲು ಶುರು ಮಾಡುತ್ತಾರೆ. ಇದು ಜಾಹೀರಾತಿನ ಒಂದು ಸಣ್ಣ ತುಣುಕು.
ಸಂಬಂಧಗಳು, ಯೋಚನೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಅತ್ತೆಯಾದವಳು ಮನೆಗೆ ಬರುವ ಸೊಸೆಗೆ ಒಳ್ಳೆ ಅಮ್ಮನೂ ಆಗಬಹುದು. ಸೂಸೆ ಒಬ್ಬ ಒಳ್ಳೆಯ ಮಗಳು ಆಗಬಹುದು. ಇವರಿಬ್ಬರು ಮನಸ್ಸು ಮಾಡಿದಲ್ಲಿ ಮನೆಯ ವಾತಾವರಣವನ್ನು ಸ್ವರ್ಗದಂತಿರಿಸಬಹುದು.
ಅತ್ತೆಯಾದವಳು ಸೊಸೆಯನ್ನು ಮಗನ ಹೆಂಡ್ತಿ ಎನ್ನುವ ಮನೋಭಾವದಿಂದ ನೋಡುವ ಬದಲು ಸೊಸೆ ರೂಪದಲ್ಲಿ ಮಗಳು ಸಿಕ್ಕಿದ್ದಾಳೆ ಅಂದುಕೊಂಡರೆ ಅತ್ತೆ ಸೊಸೆ ಕಾದಾಟಕ್ಕೆ ಅವಕಾಶವೇ ಇರುವುದಿಲ್ಲ.
ಹೊಸದಾಗಿ ಮದುವೆಯಾಗಿ ಬಂದಿರುವ ಆ ಹೆಣ್ಣು ಮಗಳ ಮನಸ್ಥಿಯನ್ನು ಅರ್ಥ ಮಾಡಿಕೊಂಡು ನಡೆಯುವುದು ಉತ್ತಮ. ತನ್ನ ಮಗನ ಬಾಳನ್ನು ಬೆಳಗಿಸ ಬಂದಿರುವಳು ಮಗನನ್ನು ಕಿತ್ತುಕೊಳ್ಳಲು ಬಂದಿಲ್ಲ ಅನ್ನುವುದನ್ನು ಅರಿತು ಬಾಳಬೇಕು.
ಸೊಸೆ ಮಾತು ಮಾತಿಗೂ ಅತ್ತೆಯ ಬಳಿ ಸಲಹೆ ಸೂಚನೆಗಳನ್ನು ಕೇಳಬಹುದು. ಅಥಾವ ಕೇಳದೆನೇ ಇರಬಹುದು ಅದು ಅವಳ ವೈಯಕ್ತಿಕ ವಿಷಯವಾಗಿರುತ್ತದೆ. ಅದನ್ನು ಪ್ರಶ್ನಿಸಬಾರದು. ಆದರೆ ಇದು ಎಲ್ಲ ಸಂದರ್ಭದಲ್ಲೂ ಅನ್ವಯಾವಾಗದಿರಲಿ.
ತೀರಾ ಖಾಸಗಿ ವಿಷಯಗಳಿಗೆ ಆಸಕ್ತಿ ತೋರಿಸುವ ಅವಶ್ಯಕತೆ ಬೇಡ. ಕೆಲವೊಂದು ನಿರ್ಧಾರಗಳು ಅವರಿಗೆ ಬಿಟ್ಟು ಬಿಡಬೇಕು.
ಅತ್ತೆಯಾದವಳು ಸೊಸೆಯನ್ನು ಮಗನ ಹೆಂಡ್ತಿ , ಮೊಮ್ಮಕ್ಕಳ ತಾಯಿ ಈ ಎರಡು ರೂಪದಲ್ಲಿ ಅವಳನ್ನು ಗೌರವಿಸಬೇಕು.
ಸೊಸೆ ಮಕ್ಕಳನ್ನು ಬೆಳೆಸುವ ರೀತಿ, ಅತ್ತೆ ಮಕ್ಕಳನ್ನು ಬೆಳೆಸಿದ ರೀತಿ ಕೊಂಚ ಭಿನ್ನವಾಗಿರಬಹುದು. ಆಧುನಿಕ ಸೊಸೆ ಮನೆ, ಕೆಲಸ ಎರಡನ್ನು ನಿಭಾಯಿಸುವಾಗ ಮಕ್ಕಳ ವಿಷಯದಲ್ಲಿ ಕೊಂಚ ತಪ್ಪಾಗಿ ಕಾಣಬಹುದು ಅದನ್ನು ಸರಿಪಡಿಸುವಲ್ಲಿ ಅತ್ತೆ ಮುಂದಿರಬೇಕು.
ಸೊಸೆಯಾದವಳು ಅತ್ತೆಯನ್ನು ತನ್ನ ತಾಯಿ ಎಂದುಕೊಂಡರೆ ತವರು ಮನೆಯವರ ಪ್ರೀತಿ ಕಾಳಜಿ ಸದಾ ಅವಳಿಗೆ ಗಂಡನ ಮನೆಯಲ್ಲಿಯೂ ಸಿಗುತ್ತದೆ.
ಗಂಡನ ಮನಸ್ಸು ಗೆಲ್ಲುವ ಸಲುವಾಗಿ ಅತ್ತೆಯ ಜೊತೆಗೆ ಪೈಪೋಟಿ ಮಾಡುವ ಬದಲು ಇಬ್ಬರು ಸೇರಿ ಗಂಡಿನ ಜೀವನವನ್ನು ಹಸಾನಾಗಿಸಬಹುದು. ಅತ್ತೆ ಸೊಸೆಯ ಜಗಳ ಮನೆ ಮನಸ್ಸು ಮುರಿಯುತ್ತದೆ. ಬದಲಾಗಿ ಹೊಂದಾಣಿಕೆ ಅರಿತು ಬಾಳುವುದು ಮುಖ್ಯ.
ಸಂಬಂದಗಳನ್ನು ಬೆಸೆಯುವ ಸೊಸೆಯಾಬೇಕೆ ಹೊರತು ಮನೆ ಮುರಿಯುವ ಹೆಣ್ಣಾಗಬಾರದು. ಮನೆ ಮಂದಿಯನ್ನು ಪ್ರೀತಿಸುವ, ಗೌರವಿಸುವ, ಸಂಸ್ಕಾರಯುತವಾಗಿ ಎಲ್ಲರ ಮನ ಗೆಲ್ಲುವ ಪ್ರಯತ್ನ ಮಾಡಬೇಕು. ಮನೆಯ ಪ್ರತಿ ಸದಸ್ಯರ ಬೇಕು ಬೇಡಗಳನ್ನು ಅರಿತು ಬಾಳುವುದು ಸೊಸೆಗೆ ತುಂಬಾ ಅವಶ್ಯಕ.