ಮೂಡುಬಿದಿರೆ: ಕಳೆದ ಐದು ವರ್ಷಗಳಲ್ಲಿ ಮೂಡುಬಿದಿರೆ-ಮುಲ್ಕಿ ಕ್ಷೇತ್ರದಲ್ಲಿ (Moodbidire-Mulki Constituency) ರೈತರ ಹಾಗೂ ಜನಸಾಮಾನ್ಯರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡ ಬಿಜೆಪಿ ಶಾಸಕರು ನಮಗೆ ಬೇಡ. ಜಾತ್ಯತೀತ ಶಕ್ತಿಯನ್ನು ಗಟ್ಟಿಗೊಳಿಸುವ ಪಕ್ಷವನ್ನು ಚುನಾವಣೆಯಲ್ಲಿ ಬೆಂಬಲಿಸುತ್ತೇವೆ ಎಂದು ರೈತ ಕಾರ್ಮಿಕ ಸಂಘಟನೆ ಹೇಳಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಯಾದವ ಶೆಟ್ಟಿ ಬಳ್ಕುಂಜೆ (Yadava Shetty Balkunje, District President of Karnataka Provincial Farmers Association) ಪರಿಸರವನ್ನು ಕೈಗಾರಿಕಾ ವಲಯ ಮಾಡುವಾಗ ಶಾಸಕ ಉಮಾನಾಥ ಕೋಟ್ಯಾನ್ (MLA Umanatha Kotyan) ರೈತರನ್ನು ಕತ್ತಲಲ್ಲಿಟ್ಟು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪೆರ್ಮುದೆ, ಬಡಗ ಎಕ್ಕಾರು, ಕುತ್ತೆತ್ತೂರು ಪರಿಸರದಲ್ಲಿ ಒಂದು ಸಾವಿರ ಎಕರೆಯನ್ನು ಸರ್ಕಾರ ಭೂಸ್ವಾಧೀನ ಪಡಿಸಿಕೊಳ್ಳುವಾಗ ಶಾಸಕರು ಜನಹಿತ ಕಾಯುವ ಜವಬ್ದಾರಿ ಯಾಕೆ ತೋರಲಿಲ್ಲ ಎಂದು ಪ್ರಶ್ನಿಸಿದರು. ಎಂಆರ್‌ಪಿಎಲ್‌ನಲ್ಲಿ (MRPL) 234 ಹುದ್ದೆಗಳಿಗೆ ಹೊಸ ನೇಮಕಾತಿಯಾಗುವಾಗ ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆಯನ್ನು ಈಡೇರಿಸಲು ವಿಫಲರಾಗಿದ್ದರು. ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಸಂತ್ರಸ್ಥರಿಗೆ ಪರಿಹಾರ ವಿತರಣೆಯಲ್ಲಿ ಸರ್ಕಾರ ತಾರತಮ್ಯ ಎಸಗಿದಾಗ ಶಾಸಕರು ಸಂತ್ರಸ್ಥರ ನೆರವಿಗೆ ಬಂದಿಲ್ಲ. ಇಂತಹ ಶಾಸಕರನ್ನು ಮತದಾರರು ಬೆಂಬಲಿಸಬಾರದು. ಚುನಾವಣೆಯಲ್ಲಿ ಬಿಜೆಪಿಗೆ ನಿಕಟ ಸ್ಪರ್ಧೆ ನೀಡುವ ಪಕ್ಷದ ಅಭ್ಯರ್ಥಿಗೆ ರೈತ ಸಂಘಟನೆ ಬೆಂಬಲ ನೀಡಲಿದೆ ಎಂದರು.
ಇದನ್ನ ಓದಿ: ನಾಟ ಪರೀಕ್ಷೆಯಲ್ಲಿ ಆಳ್ವಾಸ್ ಅತ್ಯುತ್ತಮ ಸಾಧನೆ
ಮೂಡುಬಿದಿರೆ ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಲಿಯೋ ನಝರತ್ ಮಾತನಾಡಿ ಕೆಎಂಎಫ್‌ನ್ನು ಅಮೂಲ್ ಜತೆ ವಿಲೀನಕ್ಕೆ ಪ್ರಯತ್ನಿಸುತ್ತಿರುವ ಪಕ್ಷಕ್ಕೆ ನಮ್ಮ ಬೆಂಬಲ ಇಲ್ಲ ಎಂದರು. ರೈತ ಮುಖಂಡ ಅಲ್ವಿನ್ ಮಿನೇಜಸ್ (Farmer leader Alvin Menez), ರೈತ ಕಾರ್ಮಿಕ ಸಂಘಟನೆಯ ಪ್ರಮುಖರಾದ ರಮಣಿ, ಸುಂದರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.