ಮೂಡುಬಿದಿರೆ: ತಾಲೂಕು ಕಚೇರಿ ಬಳಿಯಿರುವ ಹಳೆ ಪಡಸಾಲೆ ಕಟ್ಟಡವನ್ನು(Old Padusale Building) ತಹಶಿಲ್ದಾರ್ ಅವರು ನಿಯಮಬಾಹಿರವಾಗಿ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ಕ್ಯಾಂಟೀನ್ ನಡೆಸಲು ಗುತ್ತಿಗೆ ನೀಡಲು ಮುಂದಾಗಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕರ‍್ಯಕರ್ತರು ಬುಧವಾರ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್(Abhayachandra Jain), ಕ್ಯಾಂಟೀನ್ (Canteen)ಗುತ್ತಿಗೆಯನ್ನು ಬಿಜೆಪಿ ಕಾರ್ಯಕರ್ತನಿಗೆ ನೀಡುವ ಉದ್ದೇಶದಿಂದ ಈ ಬಗ್ಗೆ ಕರೆಯಲಾದ ಸಾರ್ವಜನಿಕ ಟೆಂಡರ್‌ನಲ್ಲಿ (Public tender)ತಹಸೀಲ್ದಾರ್ ಗೌಪ್ಯತೆಯನ್ನು ಕಾಯ್ದಕೊಂಡಿದ್ದರು. ಆದರೂ ವಿಷಯ ತಿಳಿದು ಕಾಂಗ್ರೆಸ್ ಕರ‍್ಯಕರ್ತರೊಬ್ಬರು ಕೂಡ ಅರ್ಜಿ ಸಲ್ಲಿಸಿದ್ದರೂ ತಹಸೀಲ್ದಾರ್ ಅವರು ಶಾಸಕರ ಸೂಚನೆಯಂತೆ ಬಿಜೆಪಿ ಕರ‍್ಯಕರ್ತರೊಬ್ಬರ ಅರ್ಜಿಯನ್ನು ಸಿಂಧುಗೊಳಿಸಿ ಕ್ಯಾಂಟೀನ್ ಗುತ್ತಿಗೆ ನೀಡಲು ಮುಂದಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿರುವ ಅನುಮಾನ ವ್ಯಕ್ತವಾಗಿದೆ. ತಾಲೂಕು ಕಚೇರಿ ವಿರುದ್ಧ ಈಗಾಗಲೇ ಸಾರ್ವಜನಿಕರಿಂದ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದ್ದು ಪಡಸಾಲೆಯಲ್ಲಿ ಆರಂಭವಾಗಲಿರುವ ಕ್ಯಾಂಟೀನನ್ನು ಆಡಳಿತದ ಸೌಧದ ಕಲೆಕ್ಷನ್ ಸೆಂಟರನ್ನಾಗಿ ಮಾಡುವ ಸಾಧ್ಯತೆಯಿದೆ. ಕ್ಯಾಂಟೀನ್ ಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮಾಡದಿದ್ದಲ್ಲಿ ಕಾಂಗ್ರೆಸ್ ಪ್ರತಿಭಟನೆಯನ್ನು ಮುಂದುವರಿಸಲಿದೆ ಎಂದು ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (Block Congress president)ವಲೇರಿಯನ್ ಸಿಕ್ವೇರ, ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಎಪಿಎಂಸಿ ಮಾಜಿ ಸದಸ್ಯ ವಾಸುದೇವ ನಾಯಕ್, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ಕೊರಗಪ್ಪ, ಪುರಂದರ ದೇವಾಡಿಗ, ಜೊಸ್ಸಿ ಮಿನೇಜಸ್, ಇಮಾಯಿತ್ತುಲ್ಲಾ, ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಪ್ರಮುಖರಾದ ರಾಘು ಪೂಜಾರಿ, ಚಂದ್ರಹಾಸ್ ಸನಿಲ್, ಮಹ್ಮದ್ ಅಸ್ಲಂ ಮತ್ತಿತರರಿದ್ದರು.