ಮೂಡುಬಿದಿರೆ: ಕರ್ನಾಟಕ ಪ್ರದೇಶ ಕಾಂಗ್ರೇಸ್‌ನ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ (Karnataka Pradesh Congress General Secretary Mithun Rai) ಅವರು ಇತ್ತೀಚೆಗೆ ಪುತ್ತಿಗೆ ನೂರಾನಿ ಮಸೀದಿ (Puttige Noorani Masjid) ಉದ್ಘಾಟನೆಯ ಸಂದರ್ಭ ಮುಸ್ಲಿಂ ತುಷ್ಠೀಕರಣಕ್ಕೋಸ್ಕರ ಸೌಹಾರ್ದತೆಯ ನೆಪದಲ್ಲಿ ಕೃಷ್ಣ ಮಠಕ್ಕೆ (Krishna Math) ಮುಸ್ಲಿಂ ರಾಜರು ಭೂಮಿಯನ್ನು ನೀಡಿದ್ದಾರೆ ಎಂದು ಅರ್ಧ ಸತ್ಯ ಹೇಳಿರುವುದನ್ನು ಬಿಜೆಪಿ ಮೂಲ್ಕಿ- ಮೂಡುಬಿದಿರೆ ಮಂಡಲ ಅಧ್ಯಕ್ಷ ಸುನಿಲ್ ಆಳ್ವ ವಿರೋಧಿಸಿದ್ದಾರೆ.
ಅವರು ಗುರುವಾರ ಮೂಡುಬಿದಿರೆ ಬಿಜೆಪಿ ಕಚೇರಿಯಲ್ಲಿ (BJP office) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಉಡುಪಿ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು (Sri Vishwaprasannatheertha Swamiji of Udupi Math) ಈಗಾಗಲೇ ಉಡುಪಿ ಕೃಷ್ಣ ಮಠಕ್ಕೆ ವಿಜಯನಗರ ಸಾಮಂತರಾಜ ಭೋಜ ಅರಸ (Vijayanagara Samantaraja Bhoja king) ಎಂಬ ವ್ಯಕ್ತಿಯು ಜಾಗ ನೀಡಿರುವುದಾಗಿ ಉಲ್ಲೇಖಿಸಿ ಹೇಳಿಕೆ ನೀಡಿರುವುದನ್ನು ಮಿಥುನ್ ರೈ ಅರ್ಥೈಸಿಕೊಳ್ಳಬೇಕು ಎಂದು ಹೇಳಿದ ಅವರು ರೈಗೆ ಹಿಂದು ಪರಂಪರೆಯ ತಿಳುವಳಿಕೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದರು.
ಇದನ್ನ ಓದಿ: ಮಿಥುನ್ ರೈ ವಿವಾದಾತ್ಮಕ ಹೇಳಿಕೆ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಸೌಹಾರ್ದತೆಯ ಬಗ್ಗೆ ನಮಗೂ ಒಲವಿದೆ ಆದರೆ ಶ್ರೀ ಕ್ಷೇತ್ರ ಬಪ್ಪನಾಡಿನಲ್ಲಿ ಬಪ್ಪ ಬ್ಯಾರಿಯ ಭಕ್ತಿಗೆ ದೇವಿ ಒಲಿದಿರುವುದನ್ನು ಬಜ್ಪೆ ಶಾರದೋತ್ಸವ ಸಂದರ್ಭದಲ್ಲಿ ಟ್ಯಾಬ್ಲೋ (Tableau) ರಚಿಸಿ ಮೆರವಣಿಗೆಯಲ್ಲಿ ಕೊಂಡೊಯ್ದಾಗ 2004-15ರ ಅವಧಿಯಲ್ಲಿ ಮತಾಂಧರು ವಿರೋಧಿಸಿರುವುದನ್ನು ಮಿಥುನ್ ರೈ ಪ್ರಶ್ನಿಸಿದ್ದಾರೆಯೇ? ಎಂದು ಕೇಳಿದರು.
ಗೋರಕ್ಷಣೆಯ ಬಗ್ಗೆ ಮಾತನಾಡುವ ಮಿಥುನ್ ರೈ ಗೋಪ್ರೇಮಿಯೊಬ್ಬನನ್ನು ಮತಾಂಧರು ಗೋಹಂತಕರಿಗೆ ಸವಾಲಾದ ಎಂಬ ಕಾರಣದಿಂದ ಹತ್ಯೆ ನಡೆಸಿದ್ದರೂ ಕಾಂಗ್ರೆಸ್ ಯಾಕೆ ಪ್ರಶ್ನಿಸಲಿಲ್ಲ.
ಕಿನ್ನಿಗೋಳಿಯ ಧಾಮಸ್‌ಕಟ್ಟೆಯಲ್ಲಿರುವ ಚರ್ಚ್‌ನ್ನು ಟಿಪ್ಪು ಸುಲ್ತಾನ್ (Tippu Sulthan) ಸೈನ್ಯ ದಾಳಿ ನಡೆಸಿ ಕೆಡವಲು ಹೋದಾಗ ಬಂಟ ಸಮಾಜದವರು (Bant society) ರಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದಿಗೂ ಚರ್ಚ್‌ನಲ್ಲಿ ಬಂಟ ಸಮುದಾಯಕ್ಕೆ ಗೌರವವಿದೆ. ಈ ಹಿನ್ನೆಲೆಯನ್ನು ಮಿಥುನ್ ರೈ ತನ್ನ ಭಾಷಣದಲ್ಲಿ ಉಲ್ಲೇಖಿಸುವ ತಾಕತ್ತು ಹೊಂದಿದ್ದಾರೆಯೇ ಎಂದು ಸುನಿಲ್ ಆಳ್ವ ಸವಾಲು ಹಾಕಿದರು.
ಹಿಂದು ಕ್ರೈಸ್ತರ ಮೇಲೆ ಟಿಪ್ಪು ಸುಲ್ತಾನ್ ದಾಳಿ ನಡೆಸಿದಾಗ ಸುಮಾರು 1 ವರ್ಷ ಉಡುಪಿ ಶ್ರೀಕೃಷ್ಣನ ಮೂಲ ವಿಗ್ರಹವನ್ನು ಹಿರಿಯಡ್ಕ ಸ್ವರ್ಣ ನದಿ ತೀರ ಪಕ್ಕದ ಗುಂಡಿಯಲ್ಲಿ ಅವಿತಿರಿಸಲಾಗಿತ್ತು. ಅದಕ್ಕೆ ಕೂಟದ ಗುಂಡಿ ಮಠ ಎನ್ನುತ್ತಾರೆ. ಈ ವಿಚಾರದ ಬಗ್ಗೆ ಮಿಥುನ್ ರೈಗೆ ತಿಳಿದಿದೆಯೇ ಎಂದರು. ಹಿಂದುಗಳ ಭಾವನೆಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡುವ ಮೊದಲು ಹಿಂದು ಪರಂಪರೆಯನ್ನು ತಿಳಿದುಕೊಳ್ಳಬೇಕು ಎಂದು ಸುನಿಲ್ ಆಳ್ವ ಸಲಹೆಯಿತ್ತರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಕೇಶವ ಕರ್ಕೇರ (BJP Mandal General Secretary Keshav Karkera), ಗೋಪಾಲ ಶೆಟ್ಟಿಗಾರ್, ಯುವ ಮೋರ್ಚಾ ಅಧ್ಯಕ್ಷ ಅಶ್ವಥ್ ಪಣಪಿಲ, ಪುರಸಭಾ ಸದಸ್ಯೆ ಶ್ವೇತಾ ಜೈನ್, ಪ್ರಮುಖರಾದ ಶಾಂಭವಿ ಶೆಟ್ಟಿ, ವೇಣುಗೋಪಾಲ ಭಟ್, ಸಾತ್ವಿಕ್ ಮಲ್ಯ, ಕಿಶೋರ್ ಪುತ್ತಿಗೆ, ಲೋಕೇಶ್ ಬಜ್ಪೆ ಮತ್ತಿತರರು ಉಪಸ್ಥಿತರಿದ್ದರು.