ಮೂಡುಬಿದಿರೆ: ಬಿಜೆಪಿ ಅಭ್ಯರ್ಥಿಯಾಗಿದ್ದ ಹಾಲಿ ಶಾಸಕ ಉಮಾನಾಥ ಕೋಟ್ಯಾನ್ (Sitting MLA Umanatha Kotyan) ಮತ್ತೆ ಎರಡನೇ ಬಾರಿಗೆ ಮೂಡುಬಿದಿರೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬಿಜೆಪಿ ನಡುವೆ ಜಿದ್ದಿನ ಕಣವಾಗಿ ಮಾರ್ಪಟ್ಟಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ (Congress candidate Mithun Rai) ವಿರುದ್ಧ ಗೆಲುವು ದಾಖಲಿಸಿರುವ ಕೋಟ್ಯಾನ್ ಮತ್ತೆ ವಿಧಾನ ಸಭೆ ಪ್ರವೇಶಿಸಲಿದ್ದಾರೆ. ಕಳೆದ ಬಾರಿ ಗೆದ್ದಾಗ ದ.ಕ ಜಿಲ್ಲೆಯಲ್ಲೇ ಮೊದಲ ಬಾರಿಗೆ ಮೂಡುಬಿದಿರೆಯಲ್ಲಿ ಅರಳಿದ್ದ ತಾವರೆ ಮತ್ತೆ ಈ ಬಾರಿ ಅರಳಿಸುವ ಮೂಲಕ ಕೋಟ್ಯಾನ್ ಬಿಜೆಪಿಯ ನೆಲೆಯನ್ನು ಮತ್ತೆ ಗಟ್ಟಿಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲ ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ (Priyanka Gandhi)bಕ್ಷೇತ್ರಕ್ಕೆ ಪ್ರಚಾರಕ್ಕೆ ಬಂದು ರಂಗೇರಿದ್ದ ಕಣದಲ್ಲಿ ಕೊನೆಗೂ ಕೋಟ್ಯಾನ್ ಗೆಲುವಿನ ನಗೆ ಬೀರಿದ್ದಾರೆ.
ಇದನ್ನ ಓದಿ: ವ್ಯಾಪಕ ನಕಲಿ ಮತದಾನದ ಶಂಕೆ: ಬಿಜೆಪಿ ಕಾರ್ಯಕರ್ತರಿಂದ ಠಾಣೆಗೆ ಮುತ್ತಿಗೆ
ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಮೂಡುಬಿದಿರೆ ಕ್ಷೇತ್ರದಾದ್ಯಂತ ಪಕ್ಷದ ಕಾರ್ಯಕರ್ತರ ಹರ್ಷದ ಅಲೆ ಕಂಡರೂ ರಾಜ್ಯದಲ್ಲಿ ಬಿಜೆಪಿ ಹಿನ್ನಡೆಯಿಂದ ಬೇಸರದ ವಾತಾವರಣವಿತ್ತು. ಸಾಯಂಕಾಲ ಕೋಟ್ಯಾನ್ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಂತೆ ಕಾದಿದ್ದ ಪಕ್ಷದ ನಾಯಕರು, ಕಾರ್ಯಕರ್ತರ ಜಯಘೋಷದ ಸ್ವಾಗತ ದೊರೆಯಿತು. ಪೇಟೆಗೆ ಆಗಮಿಸುವುದಕ್ಕೂ ಮೊದಲು ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೋಟ್ಯಾನ್ ಈ ಗೆಲುವು ಮತದಾರರರು ಮತ್ತು ಕಾರ್ಯಕರ್ತರಿಗೆ ಸಲ್ಲಬೇಕು. ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾದ ನೋವಿದೆ. ಆದರೆ ನಾವು ಸೋಲು, ಗೆಲುವನ್ನು ಸಮಾನವಾಗಿ ಸ್ವಿಕರಿಸುವವರು. ಆಡಳಿತ ಪಕ್ಷವಾಗಿದ್ದು ಕೊಂಡು ಅನುಭವವಿದೆ. ಈಗ ವಿಪಕ್ಷದಲ್ಲಿ ಕುಳಿತು ಕೆಲಸಮಾಡುವುದಕ್ಕೂ ಸಿದ್ಧರಿದ್ದೇವೆ. ಕಾಂಗ್ರೆಸ್ಸಿನವರು ಒಳ್ಳೆಯ ಆಡಳಿತ ಕೊಟ್ಟರೆ ಅದಕ್ಕೆ ಸಹಕಾರವಿದೆ. ಅಧಿಕಾರ ದುರುಪಯೋಗ ಮಾಡಿಕೊಂಡರೆ ಅದನ್ನು ವಿರೋಧಿಸುವ ಮೂಲಕ ರಾಜ್ಯದ ಗೌರವ ಕಾಪಾಡುತ್ತೇವೆ ಎಂದರು.
ಪಕ್ಷದ ನಾಯಕರುಗಳ ಚಿತ್ರವಿರುವ ತೆರೆದ ವಾಹನದಲ್ಲಿ ವಿದ್ಯಾಗಿರಿಯಿಂದ ಮುಖ್ಯರಸ್ತೆಯಲ್ಲಿ ಪೇಟೆಗೆ ಆಗಮಿಸಿದ ಉಮಾನಾಥ ಕೋಟ್ಯಾನ್ ಅವರು ರಸ್ತೆಯ ಇಕ್ಕೆಲಗಳಲ್ಲಿ ಜನತೆಯ ಅಭಿನಂದನೆಗೆ ವಂದಿಸಿದರು. ಕಾರ್ಯಕರ್ತರು ವಾಹನಗಳಲ್ಲಿ ಹಿಂಬಾಲಿಸಿದರು. ಭಜರಂಗಿ ಭಜರಂಗೀ ಜೈ ಜೈ ಭಜರಂಗೀ, ಭೋಲೋ ಭಾರತ್ ಮಾತಾಕೀ ಜೈ (Bholo Bharat Mataki Jai)nಎನ್ನುವ ಘೋಷಣೆಗಳು ಕಾರ್ಯಕರ್ತರಿಂದ ಮೊಳಗಿದವು.
ಪೇಟೆಯ ಶ್ರೀ ಹನುಮಂತ ದೇವಸ್ಥಾನಕ್ಕೆ ಆಗಮಿಸಿದ ಕೋಟ್ಯಾನ್ ದೇವರಿಗೆ ಸೀಯಾಳ ಸಮರ್ಪಿಸಿ ವಂದಿಸಿದರು. ವೇ.ಮೂ. ಹರೀಶ್ ಭಟ್ ಪ್ರಾರ್ಥಿಸಿ ಪ್ರಸಾದ ನೀಡಿದರು. ಆಡಳಿತ ಮೊಕ್ತೇಸರ ಜಿ.ಉಮೇಶ ಪೈ ಸಹಿತ ಮೊಕ್ತೇಸರರು ಶಾಸಕರನ್ನು ಗೌರವಿಸಿದರು.
ಮೂಡುಬಿದಿರೆಯಿಂದ ಕಟೀಲು ದೇವಳ, ಬಪ್ಪನಾಡು ದೇವಳಕ್ಕೆ ತೆರಳುತ್ತಿರುವುದಾಗಿ ತಿಳಿಸಿದ ಶಾಸಕರು ಮುಂದಿನ ದಿನಗಳಲ್ಲಿ ಅದ್ದೂರಿ ವಿಜಯೋತ್ಸವ ನಡೆಸಲಾಗುವುದು ಎಂದರು.
ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎನ್ನುವ ಕುತೂಹಲದ ನಡುವೆ ಸತತ ಮೂರನೇ ಬಾರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದ ಉಮಾನಾಥ ಕೋಟ್ಯಾನ್ 2013ರ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕರಾಗಿದ್ದ ಅಭಯಚಂದ್ರ ಜೈನ್ ವಿರುದ್ಧ ಸೋತರೂ ಬಿಜೆಪಿಯನ್ನು ಎರಡನೇ ಸ್ಥಾನ ತಂದು 4550 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಆದರೆ 2018ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಅವಕಾಶ ದೊರೆತಾಗ 29799 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿ ಬಿಜೆಪಿ ಕ್ಷೇತ್ರದಲ್ಲಿ ತನ್ನ ಮೊದಲ ಶಾಸಕನನ್ನು ಕಾಣುವ ಸಾಧನೆ ಮಾಡಿದರು. ಸತತ ನಾಲ್ಕು ಬಾರಿ ಗೆದ್ದ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ (Former Minister K. Abhay Chandra Jain) ಅವರನ್ನೇ ಮಣಿಸಿದ್ದು ಉಮಾನಾಥ ಕೋಟ್ಯಾನರ ಗೆಲುವಿಗೆ ಮೆರುಗು ನೀಡಿತ್ತು.
ಅದಾಗಲೇ ರಂಗ ನಟರಾಗಿ,ತುಳು ಅಕಾಡೆಮಿಯ ಅಧ್ಯಕ್ಷರಾಗಿ ಜನಾನುರಾಗಿಯಾಗಿದ್ದ ಉಮಾನಾಥ ಕೋಟ್ಯಾನ್ ಶಾಸಕರಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪಕ್ಷ ಸಂಘಟನೆಯ ಜತೆಗೆ ಪಕ್ಷಾತೀತ,ಜಾತ್ಯತೀತ ನೆಲೆಯಲ್ಲಿ ಎಲ್ಲರಿಗೂ ಸ್ಪಂದಿಸಿದ್ದಾರೆ.