ಮೂಡುಬಿದಿರೆ: ನನ್ನ ಮೇಲೆ ಐನೂರು ಕೋಟಿಯ ಅಕ್ರಮ ಸಂಪಾದನೆಯ ಆರೋಪವನ್ನು ಮಾಜಿ ಶಾಸಕ ಅಭಯಚಂದ್ರ ಅವರು ಮಾಡಿದ್ದಾರೆ. ಐನೂರು ಬಿಡಿ, ಐದು ಕೋಟಿಯ ಅಕ್ರಮ ಸಂಪಾದನೆ ಮಾಡಿದ್ದರೂ ನಾನು ಕಾರಣಿಕ ಕ್ಷೇತ್ರಗಳಾದ ಹನುಮಂತ ದೇವಸ್ಥಾನ (Hanuman temple), ಧರ್ಮಸ್ಥಳ (Dharmasthala) ಕ್ಷೇತ್ರಕ್ಕೆ ಬರಲು ಸಿದ್ಧನಿದ್ದೇನೆ. ಆರೋಪ ಮಾಡುವವರೂ ಬರಲಿ ಎಂದು ಶಾಸಕ ಉಮಾನಾಥ ಕೋಟ್ಯಾನ್ (MLA Umanatha Kotyan) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಭಯಚಂದ್ರ (Abhay Chandra) ಅವರು ಹಿರಿಯರು, ಇಪ್ಪತ್ತು ವರ್ಷಗಳಲ್ಲಿ ಈ ಕ್ಷೇತ್ರದ ಶಾಸಕರಾಗಿದ್ದವರು. ನಾನು ಶಾಸಕನಾಗಿ ಆಯ್ಕೆಯಾದ ಆರಂಭದಿಂದಲೂ ಅವರಿಗೆ ವಿಶೇಷವಾದ ಗೌರವವನ್ನು ಕೊಡುತ್ತಾ ಬಂದಿದ್ದೇನೆ. ನನ್ನ ಹೃದಯದಲ್ಲಿ ಅವರಿಗೆ ಸ್ಥಾನ ನೀಡಿದ್ದೆ. ಆದರೆ ಕಳೆದ ಕೆಲ ಸಮಯಗಳಿಂದ ನನ್ನನ್ನು ಏಕವಚನದಲ್ಲಿ ನಿಂದಿಸುತ್ತಿದ್ದಾರೆ. ನನ್ನನ್ನು ಬೇಕಾದರೆ ಏಕವಚನದಲ್ಲಿ ಕರೆಯಲಿ. ಆದರೆ ನಾನು ಈ ಕ್ಷೇತ್ರದ ಎರಡೂವರೆ ಲಕ್ಷ ಜನರ ಪ್ರತಿನಿಧಿ, ಶಾಸಕನೆಂಬ ಸ್ಥಾನಕ್ಕೆ ಗೌರವ ಕೊಡಲಿ. ಇದು ನನಗೆ ಮಾಡಿದ ಅವಮಾನವಲ್ಲ, ಇಡೀ ಕ್ಷೇತ್ರದ ಜನರಿಗೆ ಅವರು ಮಾಡಿರುವ ಅವಮಾನ ಎಂದು ಹೇಳಿದರು.
ಇದನ್ನ ಓದಿ: ಮಿಥುನ್ ರೈ ವಿವಾದಾತ್ಮಕ ಹೇಳಿಕೆ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ನಾನು ಬಡವನಾಗಿ ಹುಟ್ಟಿ ಬೆಳೆದದ್ದು ನಿಜ, ಆದರೆ ಬಡವನಾಗಿಯೇ ಇರಬೇಕೆಂದೇನಿಲ್ಲ, ಶಾಸಕನಾಗುವ ಮುಂಚೆ ಸಣ್ಣ ಮಟ್ಟಿನ ಗುತ್ತಿಗೆದಾರನಾಗಿದ್ದೆ, ಈಗಲೂ ಸಣ್ಣ ಪುಟ್ಟ ವ್ಯವಹಾರಗಳಿವೆ. ಆ ಮೂಲಕ ಆದಾಯ ಬರುತ್ತಿದೆ. ನನ್ನ ಆದಾಯದ ಕುರಿತ ಮಾಹಿತಿಯನ್ನು ಲೋಕಾಯುಕ್ತ, ಚುನಾವಣಾ ಆಯೋಗಕ್ಕೆ (Election Commission) ನೀಡಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಎರಡು ಸಾವಿರ ಕೋಟಿಯ ಅಭಿವೃದ್ಧಿ ಕೆಲಸಗಳನ್ನು ಕ್ಷೇತ್ರದಲ್ಲಿ ಮಾಡಿದ್ದೇನೆ. ನಾನು ಏನು ಎನ್ನುವುದು ಕ್ಷೇತ್ರದ ಜನರಿಗೆ ಗೊತ್ತಿದೆ, ಆದರೆ ಓರ್ವ ಶಾಸಕನನ್ನು ಏಕವಚನದಲ್ಲಿ ಕರೆಯುವುದು ಅಭಯರ ಹಿರಿತನಕ್ಕೆ ಶೋಭೆ ತರುವಂತದ್ದಲ್ಲ ಎಂದು ಹೇಳಿದ ಅವರು ಇದೆಲ್ಲದಕ್ಕೂ ಕ್ಷೇತ್ರದ ಜನರೇ ಉತ್ತರಿಸಲಿದ್ದಾರೆ ಎಂದರು.